ಪತಿ ಬೇಕು ಅಂದವಳು ಅನುಭವಿಸುವ ತಾಪತ್ರಯಗಳು

ಶೀತಲ್ ಶೆಟ್ಟಿ ನಾಯಕಿಯಾಗಿರೋ ಕಾರಣದಿಂದಲೇ ಸಾಕಷ್ಟು ಸೌಂಡು ಮಾಡಿದ್ದ ಚಿತ್ರ ಪತಿಬೇಕುಡಾಟ್ ಕಾಮ್ ಇಂದು ತೆರೆಗೆ ಬಂದಿದೆ.

ಮೂವತ್ತು ಮೀರಿದ ಹೆಣ್ಣುಮಗಳೊಬ್ಬಳನ್ನು ಮದುವೆ ಮಾಡಿ ಮನೆಯಿಂದ ಸಾಗಹಾಕೋದನ್ನೇ ಪರಮಗುರಿಯನ್ನಾಗಿಸಿಕೊಂಡ ಹೆತ್ತವರು. ನೋಡಲು ಬಂದ ಗಂಡು ಸಂತಾನ ಮತ್ತವರ ಮನೆ ಮಂದಿಗೆ ಕಾಫಿ ತಿಂಡಿ ಕೊಟ್ಟೂ ಕೊಟ್ಟು ಸುಸ್ತಾದ ಹುಡುಗಿ ತಾನೇ ಹುಡುಗನ ಭೇಟೆಗೆ ನಿಲ್ಲೋದು. ಕಡೆಗೂ ಗಂಡು ಸಿಕ್ಕ ಅಂತಾ ಖುಷಿ ಪಡೋ ಹೊತ್ತಿಗೇ ಉಸಿರಾಟ ಶುರುಮಾಡುವ ವರದಕ್ಷಿಣೆ ಪೀಡೆ. ಇಷ್ಟೆಲ್ಲದರ ನಡುವೆ ಕಥಾನಾಯಕಿ ಭಾಗ್ಯಳಿಗೆ ಮದುವೆಯಾಗುತ್ತದಾ? ಆಕೆಯ ತಂದೆ ತಾಯಿಯ ಆಸೆ ಕಡೆಗೂ ಈಡೇರುತ್ತದಾ ಅನ್ನೋದು ಪತಿಬೇಕು ಡಾಟ್‍ಕಾಮ್ ಚಿತ್ರದ ಪ್ರಧಾನ ಅಂಶ.

ಶೀತಲ್ ಶೆಟ್ಟಿ ಈ ಸಿನಿಮಾದಲ್ಲಿ ಭಾಗ್ಯ ಎಂಬ ಮಧ್ಯಮವರ್ಗದ, ಮದುವೆಯ ಕನಸು ಕಾಣುವ ಹೆಣ್ಣುಮಗಳನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರೆ. ನಿರ್ದೇಶಕ ರಾಕೇಶ್ ಪ್ರತಿಯೊಂದು ದೃಶ್ಯವನ್ನೂ ಕಾಮಿಡಿಯ ಮೂಲಕವೇ ಹೇಳಬೇಕು ಅಂತಾ ಮೊದಲೇ ನಿರ್ಧರಿಸಿದ್ದರ ಪರಿಣಾಮವೋ ಏನೋ ಗಂಭೀರವಾಗಬೇಕಿದ್ದ ಸೀನುಗಳು ಕೂಡಾ ಹಾಸ್ಯಮಯವಾಗಿದೆ. ಆದರೆ ಅದು ತೀರಾ ಅಭಾಸದ ಮಟ್ಟ ತಲುಪಿಲ್ಲ ಅನ್ನೋದು ಸಮಾಧಾನದ ವಿಚಾರ.

ಹೆಣ್ಣುಕುಲದ ಆತ್ಮಗೀತೆಯಂತಿರುವ ಆಡುಸ್ತ್ಯ ದ್ಯಾವರೆ ಏನ್ ಚೆಂದ ಕ್ಯಾಬರೆ ಹಾಡು ಕೇಳಲು ಮಾತ್ರವಲ್ಲ ನೋಡಲು ಸಹ ಚೆಂದಗೆ ಚಿತ್ರಿತಗೊಂಡಿದೆ. ತಂದೆ ತಾಯಿ ಪಾತ್ರದಲ್ಲಿ ಕೃಷ್ಣ ಅಡಿಗ ಮತ್ತು ಹರಿಣಿ ಮಕ್ಕಳ ಮದುವೆ ಜವಾಬ್ದಾರಿಯನ್ನು ಹೊತ್ತ ತಂದೆ ತಾಯಿಯಾಗಿ ಮನಮಿಡಿಯುವಂತೆ ನಟಿಸಿದ್ದಾರೆ.

ಒಟ್ಟಾರೆ ಇದು ಹೆಣ್ಮಕ್ಕಳನ್ನು ಹೆತ್ತ ತಂದೆ-ತಾಯಿ ಮಾತ್ರವಲ್ಲ, ಮಹಿಳೆಯರು, ಮಕ್ಕಳು, ಯುವಕರು, ವಯೋವೃದ್ಧರು ಸೇರಿದಂತೆ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ನೋಡಬಹುದಾದ ಚಿತ್ರ. ಕ್ರೈಂ, ಹಾರರ್ ಮತ್ತು ಸೈಕೋ ಸಿನಿಮಾಗಳೇ ಹೆಚ್ಚೆಚ್ಚು ಬರುತ್ತಿರೋ ಇವತ್ತಿನ ದಿನಗಳಲ್ಲಿ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟಿನ ಜೊತೆಗೆ ತಿಳಿ ಹಾಸ್ಯವನ್ನು ಬೆಸೆದುಕೊಂಡಿರುವ ಪತಿಬೇಕು ಡಾಟ್‍ಕಾಮ್ ಚಿತ್ರ ನಿಜಕ್ಕೂ ಭಿನ್ನ ಪ್ರಯತ್ನ.

ರೇಟಿಂಗ್ -3.5/5

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *