ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

ಬೆಂಗಳೂರು: ಹಾಲಿವುಡ್ ಕಥೆಗಾರನ ಕಥೆ ಮತ್ತು ಒಂದಷ್ಟು ಹೊಸತನಗಳ ಜೊತೆಗೇ ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರ ತೆರೆಗೆ ಬಂದಿದೆ. ಪ್ರೇಕ್ಷಕರು ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ ಮಾಡಿದ ಹಾರರ್ ಅನುಭವವೊಂದನ್ನು ಮನಸು ತುಂಬಿಕೊಂಡಿದ್ದಾರೆ!

ಅಮೆರಿಕ ಕನ್ನಡಿಗ ಹೇಮಂತ್ ಕೃಷ್ಣಪ್ಪ ಅವರೇ ನಿರ್ಮಾಣ ಮಾಡಿ, ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಚಿತ್ರ ಉದ್ದಿಶ್ಯ. ಆರಂಭದಿಂದಲೂ ಹೊಸತೇನೋ ಇದೆ ಎಂಬ ಕುತೂಹಲ ಕಾಯ್ದಿಟ್ಟುಕೊಂಡಿದ್ದ ಈ ಚಿತ್ರವೀಗ ಅದಕ್ಕೆ ತಕ್ಕುದಾದ ಫೀಲ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಫಲವಾಗಿದೆ.

ಮೈಸೂರು ಮೃಗಾಲಯದಲ್ಲಿ ಹಠಾತ್ತನೆ ಸತ್ತು ಬಿದ್ದ ಪ್ರಾಣಿಗಳು ಮತ್ತು ಕೆಲ ವ್ಯಕ್ತಿಗಳು. ಇದೊಂದು ಕೊಲೆ ಎಂಬುದು ಮೇಲು ನೋಟಕ್ಕೇ ಗೊತ್ತಾಗುವಂತಿದ್ದರೂ ಅದಕ್ಕೆ ಕಾರಣವೇನು, ಇದರ ಹಿಂದಿರೋರು ಯಾರೆಂಬುದು ಕಗ್ಗಂಟು. ಅದನ್ನು ಬಿಡಿಸಲು ಯಂಗ್ ಆಂಡ್ ಎನರ್ಜೆಟಿಕ್ ಸಿಐಡಿ ಆಫೀಸರ್ ಆಗಮನ. ಯಾವುದಕ್ಕೂ ಕೇರ್ ಮಾಡದ ಈ ಅಧಿಕಾರಿಯನ್ನು ತನಿಖೆಯ ಜಾಡು ಭೀಕರ ಮಾಂತ್ರಿಕನೊಬ್ಬನ ಮಾಂತ್ರಿಕ ಮಂಡಲಕ್ಕೆ ತಂದು ನಿಲ್ಲಿಸುತ್ತೆ. ಈತನ ಸುತ್ತ ಮೂವರು ಹುಡುಗೀರ ದರ್ಶನವೂ ಆಗುತ್ತೆ. ಅಲ್ಲಿಂದಲೇ ಹಾರರ್ ಕಥನವೂ ತೆರೆದುಕೊಳ್ಳುತ್ತೆ. ಆದರೆ ಈ ಹಾರರ್ ವಿಧಾನವೂ ತಾಂತ್ರಿಕ ಶ್ರೀಮಂತಿಕೆ ಹೊಂದಿದೆ ಎಂಬುದು ಈ ಚಿತ್ರದ ಅಸಲೀ ಶಕ್ತಿ.

ಒಟ್ಟಾರೆಯಾಗಿ ಸಿಐಡಿ ಅಧಿಕಾರಿಯಾಗಿಯೂ ಅಬ್ಬರಿಸಿರುವ ಹೇಮಂತ್ ಕೃಷ್ಣಪ್ಪ, ಮಾಮೂಲಾದ ಕಥೆಯನ್ನೂ ಭಿನ್ನ ಬಗೆಯಲ್ಲಿ ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಾಗಿಯೂ ಅವರ ಕೆಲಸ ಮುಖ್ಯವಾಗುತ್ತದೆ. ಇದಕ್ಕೆ ಎಲ್ಲ ಪಾತ್ರಧಾರಿಗಳೂ ಸಾಥ್ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ ಮತ್ತು ಇಚ್ಚಾ ಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಹಿನ್ನೆಲೆ ಸಂಗೀತ ಇಡೀ ಚಿತ್ರಕ್ಕೆ ಶಕ್ತಿ ತುಂಬಿದರೆ ತಾಂತ್ರಿಕ ಶ್ರೀಮಂತಿಕೆ ಅದಕ್ಕೆ ಸಾಥ್ ನೀಡಿದೆ. ಒಂದಷ್ಟು ಕೊರತೆಗಳಿದ್ದರೂ ಒಂದೊಳ್ಳೆ ಚಿತ್ರ ನೋಡಿದ ಅನುಭವವನ್ನಂತೂ ಉದ್ದಿಶ್ಯ ನೀಡುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *