ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

ಬೆಂಗಳೂರು: ಫಸ್ಟ್ ರ‍್ಯಾಂಕ್ ಖ್ಯಾತಿಯ ಗುರುನಂದನ್ ಅಭಿನಯದ `ರಾಜು ಕನ್ನಡ ಮೀಡಿಯಂ’ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

ಕನ್ನಡ ಮೀಡಿಯಂ ನಲ್ಲಿ ಕಲಿತಿರುವ ಹುಡುಗ ರಾಜಧಾನಿಗೆ ಬಂದು ಹೇಗೆ ಜೀವನ ನಡೆಸುವುದರ ಜೊತೆಗೆ ಕನ್ನಡದ ಕಂಪನ್ನು ಹೇಗೆ ಪಸರಿಸುತ್ತಾನೆ ಎಂಬುದೇ ಕಥೆಯ ಜೀವಾಳವಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗಿನಿಂದಲೂ ಸ್ಯಾಂಡಲ್‍ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಈ ಹಿಂದೆ ಗುರುನಂದನ್ ನಟನೆಯ `ಫಸ್ಟ್ ರ‍್ಯಾಂಕ್ ರಾಜು’ ಭರ್ಜರಿ ಯಶಸ್ಸನ್ನು ಕಂಡಿತ್ತು. ಕನ್ನಡ ಮೀಡಿಯಂ ರಾಜು ಮೊದಲ ಸಿನಿಮಾದ ಮುಂದುವೆರಿದ ಭಾಗವೇ ಎಂದು ಹೇಳಲಾಗಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಗುರು ಅವರ ಕನ್ನಡದ ಬಗೆಗಿನ ಒಲವು, ಸಿನಿಮಾದಲ್ಲಿ ಬರುವ ಕಾಮಿಡಿ ದೃಶ್ಯಗಳು ಎಲ್ಲರನ್ನು ನಗಿಸುವುದು ಪಕ್ಕಾ ಆಗಿದೆ.

ಚಿಕ್ಕಣ್ಣ, ಕುರಿ ಪ್ರತಾಪ್ ನಗಿಸಲು ರಾಜುವಿಗೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ.

Comments

Leave a Reply

Your email address will not be published. Required fields are marked *