ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

ಬೆಂಗಳೂರು: ‘ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ನನ್ನ ಹೆಸರಿನ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಹೆಸರಿನ ಪ್ರಭೆ ಮಾತ್ರ ಇರಬೇಕು…’ ಹೀಗೊಂದು ಪ್ರತಿಜ್ಞೆ ಮಾಡಿಯೇ ಚಿತ್ರರಂಗದ ತೆಕ್ಕೆಗೆ ಬಿದ್ದವರು ರವಿಕಿರಣ್. ತನ್ನ ಇಂಗಿತದಂತೆಯೇ ಉಪೇಂದ್ರ ಅವರ ಆತ್ಮೀಯ ಸಾಂಗತ್ಯ ಪಡೆದು, ಅವರದ್ದೊಂದು ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ ರವಿಕಿರಣ್ ಈಗ ತಮ್ಮ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ನಿರ್ದೇಶನ ಮಾಡಿರೋ ಹೊಸತನದ ಚಿತ್ರ ಗಿರ್ ಗಿಟ್ಲೆ ಇದೇ ಮಾರ್ಚ್ 15ರಂದು ಬಿಡುಗಡೆಯಾಗಲು ರೆಡಿಯಾಗಿದೆ..!

ಉಪ್ಪಿ ಅಭಿಮಾನದಿಂದಲೇ, ಅವರ ಸ್ಫೂರ್ತಿಯಿಂದಲೇ ಚಿತ್ರರಂಗಕ್ಕೆ ಬಂದವರು ಸಾಕಷ್ಟು ಮಂದಿಯಿದ್ದಾರೆ. ಅವರಲ್ಲಿ ರವಿಕಿರಣ್ ಕೂಡಾ ಒಬ್ಬರು. ಆದರೆ ಅಂದುಕೊಂಡಿದ್ದನ್ನು ಪಟ್ಟು ಹಿಡಿದು ಮಾಡುವ, ಮಾಡಿದ್ದೆಲ್ಲವೂ ಡಿಫರೆಂಟಾಗಿರಬೇಕೆಂದೇ ಬಯಸುವ ರವಿಕಿರಣ್ ಈ ವಿಚಾರದಲ್ಲಿಯೂ ಅಪ್ಪಟ ಉಪ್ಪಿ ಶಿಷ್ಯ. ಬಹುಶಃ ಅಂಥಾದ್ದೊಂದು ಛಲ ಇಲ್ಲದೇ ಹೋಗಿದ್ದರೆ ಎದುರಾದ ಅಡೆತಡೆಗಳಿಂದ ತಲೆತಪ್ಪಿಸಿಕೊಂಡು ಎಲ್ಲಿಯೋ ಕಳೆದು ಹೋಗಬೇಕಾಗುತ್ತಿತ್ತು. ಅಖಂಡ ಆರು ವರ್ಷಗಳ ಕಾಲ ಬಿದ್ದ ಏಟು, ಆದ ಆಘಾತಗಳನ್ನೆಲ್ಲ ಸಹಿಸಿಕೊಂಡು ಗಿರ್ ಗಿಟ್ಲೆ ಅಂತೊಂದು ಸಿನಿಮಾವನ್ನು ರೂಪಿಸೋದು ಖಂಡಿತಾ ಸಾಧ್ಯವಿರುತ್ತಿರಲಿಲ್ಲ.

ಇಂಥಾ ಸವಾಲಿನ ಹಾದಿಯಲ್ಲಿ ಸಾಗಿ ಬಂದರೂ ಕೂಡಾ ಗಿರ್ ಗಿಟ್ಲೆ ಚಿತ್ರವನ್ನು ಹೊಸಾ ಥರದಲ್ಲಿ ಪೊರೆದ ಖುಷಿಯೊಂದು ರವಿಕಿರಣ್ ಅವರಿಗಿದೆ. ಅದಕ್ಕೆ ಈಗ ಈ ಸಿನಿಮಾ ಬಗ್ಗೆ ಹುಟ್ಟಿಕೊಂಡಿರೋ ಕ್ರೇಜ್‍ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಕಷ್ಟದ ಹಾದಿಯಲ್ಲಿ ಸಾಗಿ ಬಂದು ತಮ್ಮ ಕನಸನ್ನು ನನಸು ಮಾಡಿಕೊಂಡಿರೋ ರವಿಕಿರಣ್ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. ಚೆಂದಗೆ ಓದಿ ಖಾಸಗಿ ಕಂಪೆನಿಯೊಂದರಲ್ಲಿ ಎಚ್ ಆರ್ ರಿಕ್ರೂಟರ್ ಆಗಿ ಕೈತುಂಬಾ ಸಂಬಳವನ್ನೂ ಅವರು ಪಡೆಯುತ್ತಿದ್ದರು. ಆದರೆ ಇದೆಲ್ಲದರ ನಡುವೆಯೂ ಅವರಿಗೆ ಉಪೇಂದ್ರ ಅವರ ಸಿನಿಮಾಗಳ ಮೇಲೆ, ಉಪ್ಪಿಯ ಭಿನ್ನ ಆಲೋಚನೆಗಳ ಮೇಲೆ ಎಂಥಾದ್ದೋ ಮೋಹವಿತ್ತು.

ಹೀಗಿರುವಾಗಲೇ ಅದೊಂದು ಸಲ ಗೆಳೆಯರೆಲ್ಲ ಕಿರು ಚಿತ್ರವೊಂದನ್ನು ಮಾಡಲು ಮುಂದಾಗಿದ್ದರು. ಅದರಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸೋ ಸದವಕಾಶ ರವಿಕಿರಣ್ ಪಾಲಿಗೆ ಕೂಡಿ ಬಂದಿತ್ತು. ಹಾಗೆ ಚಿತ್ರೀಕರಣಕ್ಕೆ ಹೋದಾಗ ಎಲ್ಲ ವಿಭಾಗಗಳೂ ಅವರನ್ನು ಸೆಳೆದುಕೊಂಡಿದ್ದವು. ಕ್ಯಾಮೆರಾ ವರ್ಕ್ ಅಂತೂ ಅವರನ್ನು ಅಪಾರವಾಗಿ ಸೆಳೆದುಕೊಂಡಿತ್ತು. ಅದಾಗಲೇ ಉಪ್ಪಿ ಪ್ರಭಾವ ಬೇರೆ ಇತ್ತಲ್ಲಾ? ಅದೆಲ್ಲವೂ ಸೇರಿಕೊಂಡು ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ಸಿನಿಮಾ ಮಾಡಬೇಕೆಂಬ ಆಸೆಯಿಂದ ಹೊರ ಬಂದು ನಿಂತವರು ರವಿಕಿರಣ್. ಹೇಗೋ ಮಾಡಿ ಉಪೇಂದ್ರ ಅವರ ಪರಿಚಯ ಮಾಡಿಕೊಂಡ ಅವರ ಮುಂದೆ ಗುರಿ ಮತ್ತಷ್ಟು ಸ್ಪಷ್ಟವಾಗಲಾರಂಭಿಸಿತ್ತು.

ಈ ನಡುವೆ ಒಂದೆರಡು ತಮಿಳು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಬಂದ ರವಿಕಿರಣ್ ತದ ನಂತರ ಗಿರ್ ಗಿಟ್ಲೆ ಕಥೆ ರೆಡಿ ಮಾಡಿಕೊಂಡಿದ್ದರು. 2012ರ ಸುಮಾರಿಗೆ ಪ್ರಚಾರದ ಶೋಕಿಯ ಆಸಾಮಿಯೊಬ್ಬರು ನಿರ್ಮಾಣ ಮಾಡೋದಾಗಿ ಮುಂದೆ ಬಂದು ಮುಹೂರ್ತ ನಡೆಸಿ, ಭರ್ಜರಿ ಪ್ರಚಾರ ಪಡೆದು ನಾಪತ್ತೆಯಾಗಿ ಬಿಟ್ಟಿದ್ದರು. ಇದರ ಆಫ್ಟರ್ ಎಫೆಕ್ಟ್ ರವಿಕಿರಣ್ ಅವರನ್ನು ಮೂರೂವರೆ ವರ್ಷಗಳ ಕಾಲ ಬಿಡದೆ ಬಾಧಿಸಿತ್ತು. ಆದರೂ ಪಟ್ಟು ಬಿಡದೆ ಪ್ರಯತ್ನಿಸಿದ ಫಲವಾಗಿಯೇ ಗಿರ್ ಗಿಟ್ಲೆ ಈವತ್ತು ದೊಡ್ಡ ಮಟ್ಟದ ಕ್ರೇಜ್ ನೊಂದಿಗೆ ಬಿಡುಗಡೆಗೆ ರೆಡಿಯಾಗಿದೆ. ಈ ಮೂಲಕ ಒಂದು ಹಿಟ್ ಚಿತ್ರ ಮತ್ತು ಭಿನ್ನ ಒಳನೋಟದ ನಿರ್ದೇಶಕ ಕನ್ನಡಕ್ಕೆ ಸಿಗೋದು ಪಕ್ಕಾ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *