ಪಬ್‍ನಲ್ಲಿ ಕನ್ನಡ ಹಾಡು ಗಲಾಟೆ- ಕ್ಷಮೆಯಾಚಿಸಿದ ಡಿಜೆ ಸಿದ್ದಾರ್ಥ್

– ಅತಿ ಹೆಚ್ಚು ಇಷ್ಟವಾಗುವ ಭಾಷೆ ಕನ್ನಡ
– ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ

ಬೆಂಗಳೂರು: ಕನ್ನಡ ಹಾಡು ಹಾಕಲ್ಲ ಎಂದು ಹಲ್ಲೆಗೆ ಮುಂದಾಗಿ ಸುದ್ದಿಯಾಗಿದ್ದ ಕೋರಮಂಗಲದ ಬದ್ಮಾಶ್ ಪಬ್ ಡಿಜೆ ಸಿದ್ದಾರ್ಥ್ ಇದೀಗ ಕ್ಷಮೆಯಾಚಿಸಿದ್ದಾರೆ.

ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಿದ್ದಾರ್ಥ್, ನಾನು ಪುನೀತ್ ರಾಜ್ ಕುಮಾರ್ ಅಭಿಮಾನಿ. ಪ್ರತಿ ದಿನ ಗೊಂಬೆ ಹೇಳುತೈತೆ ಹಾಡು ಪ್ಲೇ ಮಾಡ್ತಾ ಇದ್ದೆ. ಆದರೆ ಕಾರಣಾಂತರಗಳಿಂದ ಶನಿವಾರ ರಾತ್ರಿ ಕನ್ನಡ ಹಾಡು ಪ್ಲೇ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಕ್ಷೇಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

ಸಿದ್ದಾರ್ಥ್ ಕ್ಷಮೆ:
ಕಾರಣಾಂತರದಿಂದ ಶನಿವಾರ ರಾತ್ರಿ ಕನ್ನಡ ಹಾಡನ್ನು ಪ್ಲೇ ಮಾಡಿಲ್ಲ ಎಂದು ಒಪ್ಪಿಕೊಂಡ ಡಿಜೆ, ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿಯೇ. ಕಾವೇರಿ ನೀರು ಕುಡಿದು ಬೆಳೆದಿದ್ದೇನೆ. ನನಗೆ ಅತಿ ಹೆಚ್ಚು ಇಷ್ಟವಾಗುವ ಭಾಷೆ ಅಂದರೆ ಕನ್ನಡ. ನಾನು ಪ್ರತಿ ಬಾರಿಯೂ ಕನ್ನಡ ಹಾಡನ್ನು ಪ್ಲೇ ಮಾಡ್ತೇನೆ. ಪುನೀತ್ ರಾಜ್ ಕುಮಾರ್ ಎಂದರೆ ನನಗೆ ತುಂಬಾ ಇಷ್ಟ. ಬೊಂಬೆ ಹೇಳುತೈತೆ ಹಾಡನ್ನು ಪ್ರತಿ ಬಾರಿಯೂ ಪ್ಲೇ ಮಾಡ್ತೇನೆ. ನಿನ್ನೆ ತಡವಾಗಿದ್ದರಿಂದ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ.

ಸಡನ್ ಆಗಿ 12.30ಕ್ಕೆ ಪಬ್ ಕ್ಲೋಸ್ ಮಾಡಲು ಹೇಳಿದ್ರು. ಹಾಗಾಗಿ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ. ಕನ್ನಡ ಹಾಡು ಪ್ಲೇ ಮಾಡದಿದ್ದಕ್ಕೆ ನಾನು ಕ್ಷಮೆ ಕೇಳ್ತೇನೆ. ಆದರೆ ಸುಮಿತಾ ಹಾಗೂ ಸ್ನೇಹಿತರು ಮಾಡುತ್ತಿರುವ ಆರೋಪ ಸುಳ್ಳು. ಮ್ಯೂಸಿಕ್ ಸಿಸ್ಟಂ ಆಫ್ ಮಾಡಿದ ಮೇಲೆ ಕನ್ನಡ ಹಾಡು ಯಾಕೆ ಹಾಕಿಲ್ಲ ಅಂದ್ರು. ಮೊದಲು ಅವರು ಕನ್ನಡ ಹಾಡು ಹಾಕಲು ಕೇಳಿಲ್ಲ. ಸಿಸ್ಟಂ ಆಫ್ ಆಗಿದ್ರಿಂದ ಮತ್ತೆ ಪ್ಲೇ ಮಾಡಲು ಕಷ್ಟ ಎಂದೆ. ಅವರು 10 ಜನ ನಿರಂತರವಾಗಿ ಬೈಯುತ್ತಲೇ ಇದ್ರು.

ಕೆಟ್ಟದಾಗಿ ಬೈದಾಗ ನಾನು ಒಂದೆರಡು ಮಾತು ಬೈದಿದ್ದೇನೆ. ಡಿಜೆ ಗೆ ಕನ್ನಡ ಬರಲ್ಲ ಎಂದು ಅವರು ಹೇಳಿದ್ದಾರೆ. ನಾನು ಕನ್ನಡದಲ್ಲೇ ಅವರ ಹತ್ತಿರ ಮಾತಾಡಿದ್ದೇನೆ. ಸಮಯ ಬಂದಾಗ ನಾನು ಮಾಧ್ಯಮಕ್ಕೆ ಬಂದು ಮಾತಾಡ್ತೇನೆ ಎಂದು ಡಿಜೆ ತಿಳಿಸಿದ್ದಾರೆ. ಅಲ್ಲದೆ ಫೇಸ್ ಬುಕ್ ನಲ್ಲಿ ಬೊಂಬೆ ಹೇಳುತೈತೆ ಹಾಡು ಹಾಕಿದ್ದ ವೀಡಿಯೋ ಕೂಡ ಶೇರ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *