157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಾಸ್ಯ ನಟ ವಠಾರ ಮಲ್ಲೇಶ್ ಇನ್ನಿಲ್ಲ

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಾಸ್ಯ ನಟ ವಠಾರ ಮಲ್ಲೇಶ್(42) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಎರಡು ಕಿಡ್ನಿ ಹಾಗು ಬ್ರೇನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಇವರಿಗೆ ನಾಟಕ ಮತ್ತು ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟ ಪಟ್ಟಿದ್ದರು. ಅದೇ ರೀತಿ ನಾಟಕ ಮತ್ತು ಸಿನಿಮಾಗಳನ್ನು ನೋಡಿ ಸಂಭಾಷಣೆಗಳನ್ನು ಅನುಕರಿಸಿ ಹೇಳುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು.

ಒಂದು ದಿನ `ವಠಾರ’ ಧಾರಾವಾಹಿ ಮ್ಯಾನೇಜರ್ ಮಂಜುನಾಥ್ ಇವರ ಟೆಲಿಫೋನ್ ಬೂತ್‍ಗೆ ಬಂದಿದ್ದರು. ಅಲ್ಲಿ ಮಲ್ಲೇಶ್ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡಿದ್ದರು. ಆ ಮೂಲಕ ಕಿರುತೆಗೆ ಕಾಲಿಟ್ಟಿದ್ದರು. ಬಳಿಕ ಕಿರುತೆರೆಯಿಂದ ಬೆಳ್ಳಿತೆರೆ ಪಾದಾರ್ಪಣೆ ಮಾಡಿದ್ದರು. ಮಲ್ಲೇಶ್ ಅವರು ಸುಮಾರು 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಸುಮಾರು 60ಕ್ಕೂ ಅಧಿಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ನಾಟಕ ಮತ್ತು ಕಿರುತೆರೆಯಲ್ಲಿ ಸಾಗುತ್ತಿದ್ದ ಅವರು ಮೋಹನ್ ಜುನೇಜಾ ಅವರ ಮೂಲಕ ಬೆಳ್ಳಿತೆರೆ ಕಾಲಿಟ್ಟಿದ್ದರು. ಬಳಿಕ ದರ್ಶನ್ ಅಭಿನಯದ `ಸುಂಟರಗಾಳಿ’, `ದತ್ತ’ ಮತ್ತು `ಅಭಯ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. `ಅಜಯ್’, `ಚಾರ್‍ಮಿನಾರ್’, `ಚಡ್ಡಿದೋಸ್ತ್’ ಸೇರಿದಂತೆ 157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಅಭಿನಯಿಸಿದ್ದಾರೆ.

ಸದ್ಯಕ್ಕೆ ಬನ್ನೇರುಘಟ್ಟದ ಜಂಗಲ್ ಪಾಳ್ಯದಲ್ಲಿ ಮಲ್ಲೇಶ್ ಅವರ ಅಂತಿಮ ವಿಧಿ ವಿಧಾನದ ಕಾರ್ಯಗಳಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

Comments

Leave a Reply

Your email address will not be published. Required fields are marked *