ಏನಿದು ಹತ್ಯೆ ಪ್ರಕರಣ? ದರ್ಶನ್‌ ಅರೆಸ್ಟ್‌ ಆಗಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ

ಬೆಂಗಳೂರು: ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ (Murder Case) ಆರೋಪದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star Darshan) ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ (Renukaswamy) ಅವರನ್ನು ಜೂನ್‌ 9 ರಂದು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಕಾಮಾಕ್ಷಿಪಾಳ್ಯ ರಿಂಗ್‌ ರೋಡ್‌ ಬಳಿ ಇರುವ  ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಮುಂದಿರುವ ಮೋರಿಯಲ್ಲಿ ಶವವನ್ನು ಎಸೆದಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ  ಆರೋಪಿಗಳನ್ನು ಬಂಧಿಸಿದ್ದರು. ಬಂಧನ ಮಾಡಿದ ಆರೋಪಿಗಳ ವಿವರ ಕಲೆ ಹಾಕಿದಾಗ ಅವರು ದರ್ಶನ್‌ ಬಾಡಿಗಾರ್ಡ್‌ಗಳು (Darshan Bodyguard) ಎಂಬ ಶಾಕಿಂಗ್‌ ವಿಚಾರ ಗೊತ್ತಾಗಿದೆ.

ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ ಅವರು ದರ್ಶನ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರ್‌ ಆರ್‌ ನಗರದಲ್ಲಿ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕೊಲೆಗೆ ದರ್ಶನ್‌ ಸುಪಾರಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಆರೋಪ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ ಅವರನ್ನು ಇಂದು ಬೆಳಗ್ಗೆ ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ  ನಡೆಸುತ್ತಿದ್ದಾರೆ.

ಅಶ್ಲೀಲ ಮೆಸೇಜ್‌ಗೆ ಕೊಲೆ:
ಪವಿತ್ರಾ ಗೌಡ (Pavithra Gowda) ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದರು. ಈ ಕಾರಣಕ್ಕೆ ದರ್ಶನ್‌ ಕಡೆಯವರು ರೇಣುಕಾಸ್ವಾಮಿಯ ಅವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೊಲೆ ಬೆಳಕಿಗೆ ಬಂದಿದ್ದು ಹೇಗೆ?
ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಗಸ್ತು ತಿರುಗುತ್ತಿದ್ದಾಗ 35 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಅವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿಸುತ್ತಾರೆ. ಪೊಲೀಸರು ಕೊಲೆಯಾದ ವ್ಯಕ್ತಿ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಾರೆ. ತನಿಖೆಯ ವೇಳೆ ಪತ್ತೆಯಾದ ಶವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯದ್ದು ಎನ್ನುವುದು ಗೊತ್ತಾಗುತ್ತದೆ. ನಂತರ ಫೋನ್‌ ಕರೆ, ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧನ ಮಾಡಿದಾಗ ಈ ಪ್ರಕರಣದ ಮಾಹಿತಿ ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿದೆ.