ಕಂಬಳ ವೀರನ ಸಿಕ್ಸ್ ಪ್ಯಾಕ್ ಸೀಕ್ರೆಟ್ ರಿವೀಲ್

ಬೆಂಗಳೂರು: ಕಂಬಳದ ಹೀರೋ ಶ್ರೀನಿವಾಸ್‍ಗೌಡ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಹಳ್ಳಿ ಹೈದನ ಮಿಂಚಿನ ಓಟ ಈಗ ದೇಶದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಕಂಬಳದ ಕೆಸರು ಗದ್ದೆಯಲ್ಲಿ ಶ್ರೀನಿವಾಸ್ ಗೌಡ ಓಡಿದ ಪರಿಗಂತೂ ಅವರಿಗೆ ಈಗ ಕರ್ನಾಟಕದ ಉಸೇನ್ ಬೋಲ್ಟ್ ಅನ್ನುವ ಬಿರುದನ್ನು ನೀಡಿದೆ. ಮಿಂಚಿನ ಓಟದ ಶ್ರೀನಿವಾಸ್ ಗೌಡ ದೇಹದಾರ್ಢ್ಯ ಕೂಡ ಎಲ್ಲರ ಗಮನ ಸೆಳೆದಿತ್ತು. ಸಿಕ್ಸ್ ಪ್ಯಾಕ್ ಹೊಂದಿರುವ ಕಂಬಳದ ವೀರನ ಮೈಕಟ್ಟಿಗೆ ಎಲ್ಲರೂ ಫಿದಾ ಆಗಿದ್ದರು. ಇದನ್ನೂ ಓದಿ: ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

ಸಾಮಾನ್ಯವಾಗಿ ಜಿಮ್‍ನಲ್ಲಿ ಕಸರತ್ತು ಮಾಡಿ ಬೆವರಿಳಿಸಿದಷ್ಟೆ ಸಿಕ್ಸ್ ಪ್ಯಾಕ್ ಬರುತ್ತೆ ಅನ್ನೋ ಕಲ್ಪನೆ ಎಲ್ಲರಿಗೂ ಇದೆ. ಅಸಲಿಗೆ ಶ್ರೀನಿವಾಸ್ ಗೌಡ ಜಿಮ್ ಮೆಟ್ಟಿಲೇ ಹತ್ತಿಲ್ಲ. ಇದನ್ನೂ ಓದಿ:   ಮತ್ತೆ ಚಿನ್ನದ ಪದಕ ಬಾಚಿದ ಕಂಬಳದ ಉಸೇನ್ ಬೋಲ್ಟ್

ನಮ್ಮಂತ ಬಡವರಿಗೆ ಜಿಮ್ ಎಲ್ಲಿ ಸಾರ್ ನಾನು ಮೈಬಗ್ಗಿಸಿ ಗದ್ದೆಯಲ್ಲಿ ದುಡಿಮೆ ಮಾಡ್ತೀನಿ. ಗಾರೆ ಕೆಲಸ, ಮಳೆಗಾಲ ಬಂದರೆ ಬೇರೆಯವರ ಹೊಲದಲ್ಲಿ ಕೆಲಸ ಮಾಡುತ್ತೇನೆ. ಸಾಗುವಾಳಿ ಕೃಷಿ ಕೆಲಸ ಮಾಡುತ್ತೀನಿ. ಬಿಡುವಿಲ್ಲದ ಕೆಲಸದಿಂದ ನಂಗೆ ಸಿಕ್ಸ್ ಪ್ಯಾಕ್ ಬಂದಿದೆ ಎಂದು ಪಬ್ಲಿಕ್ ಟಿವಿ ಜೊತೆ ಶ್ರೀನಿವಾಸ್ ಸಿಕ್ಸ್ ಪ್ಯಾಕ್ ಸೀಕ್ರೆಟ್ ಹಂಚಿಕೊಂಡರು.

ಜೊತೆಗೆ ಯುವಕರು ಕೃಷಿ ಕೆಲಸ ಮಾಡಿದರೆ, ಉಳುಮೆ ಮಾಡಿದರೆ ಆರೋಗ್ಯದ ಜೊತೆಗೆ ಫಿಟ್ ಆಗಿರುತ್ತಾರೆ ಎಂಬ ಮೆಸೇಜ್ ಕೂಡ ಕೊಟ್ಟರು.

ಶ್ರೀನಿವಾಸ್ ಗೌಡ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ಮೂಡುಬಿದ್ರೆಯ ಮಿಜಾರಿನ ಅಶ್ವತ್ಥಪುರದ ನಿವಾಸಿಯಾಗಿರುವ ಶ್ರೀನಿವಾಸ್ ಗೌಡ, ಪರಿಶಿಷ್ಟ ವರ್ಗಕ್ಕೆ ಸೇರಿದ ಕುಡುಂಬಿ ಜನಾಂಗದ ವ್ಯಕ್ತಿ. ಆದರೆ ಕಂಬಳದಲ್ಲಿ ಮಾಡಿದ ಸಾಧನೆ ಮಾತ್ರ ಶ್ರೀನಿವಾಸ್  ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ. ಅತಿ ವೇಗದ ಓಟದ ದಾಖಲೆಯ ಉಸೇನ್ ಬೋಲ್ಟ್ ಮೀರಿಸುವ ಸಾಧನೆ ಮಾಡಿದ್ದಾಗಿ ಹೋಲಿಸಲಾಗುತ್ತಿದೆ. ಇಂಥ ಖ್ಯಾತಿ ಬಂದಿದ್ದರೂ, ಶ್ರೀನಿವಾಸ್ ಮಾತ್ರ ಎಂದಿನಂತೇ ಕಂಬಳದಲ್ಲಿ ತೊಡಗಿಸಿಕೊಂಡಿದ್ದಾರೆ. ಕಂಬಳ ಬಿಟ್ಟರೆ ಕಟ್ಟಡ ಕೆಲಸದ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.

ಶ್ರೀನಿವಾಸ್ ಗೌಡರ ಸಾಧನೆ ವಿಶ್ವದ ಗಮನ ಸೆಳೆದಿದ್ದರೂ, ಪದಕದ ಬೇಟೆ ನಿಂತಿಲ್ಲ. ಭಾನುವಾರ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಮೂರು ವಿಭಾಗದಲ್ಲಿ ಮತ್ತೆ ಮೂರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಬಾರಿಯ ಕಂಬಳದ ಋತುವಿನಲ್ಲಿ ಸತತವಾಗಿ ಚಿನ್ನದ ಪದಕ ಗೆಲ್ಲುತ್ತಾ ಬಂದು ದಾಖಲೆ ಮಾಡಿದ್ದಾರೆ. ಈ ಬಾರಿ ಇನ್ನೆರಡು ಕಂಬಳ ಮಾತ್ರ ಉಳಿದಿದ್ದು, ನಾಲ್ಕು ಕೋಣಗಳ ಜೊತೆ ಓಡುವ ಶ್ರೀನಿವಾಸ್ ಗೌಡ ಚಿನ್ನಕ್ಕೆ ಲಗ್ಗೆಯಿಟ್ಟು ಹೊಸ ದಾಖಲೆ ನಿರ್ಮಿಸುವ ಇರಾದೆಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *