ನಮ್ಮ ಶಾಲೆಗೆ ಬಿಸಿಯೂಟ ನೀಡಿ: ಸರ್ಕಾರಕ್ಕೆ ಕಲ್ಲಡ್ಕ ಭಟ್ ಮನವಿ

ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತನ್ನ ನೇತೃತ್ವದ ಎರಡು ಶಾಲೆಗಳಿಗೆ ಬಿಸಿಯೂಟವನ್ನು ನೀಡಬೇಕೆಂದು ಕೊನೆಗೂ ಸರ್ಕಾರದ ಮೊರೆ ಹೋಗಿದ್ದಾರೆ. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳು ತಮಗೆ ಬಿಸಿಯೂಟ ನೀಡಿ ಎಂದು ಸರ್ಕಾರದಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬಿಸಿಯೂಟಕ್ಕಾಗಿ ಹಣದ ಮೂಲಕ ದೇಣಿಗೆ ಪಡೆಯುತ್ತಿದ್ದರು. ಆದರೆ ಕಳೆದ ವರ್ಷ ಸಚಿವ ರಮಾನಾಥ ರೈ ದೇವಸ್ಥಾನದಿಂದ ಹಣದ ಮೂಲಕ ಅನುದಾನ ನೀಡುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಪರಿಣಾಮ ಸರ್ಕಾರ ಅನುದಾನವನ್ನು ಕಡಿತಗೊಳಿಸಿತ್ತು.

ಆ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಶಾಲಾ ಮಕ್ಕಳನ್ನು ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಸರ್ಕಾರ ನೀಡದಿದ್ದರೂ ಭಿಕ್ಷೆಯೆತ್ತಿಯಾದ್ದರೂ ಮಕ್ಕಳಿಗೆ ಅನ್ನ ಹಾಕುತ್ತೇನೆ. ಮಕ್ಕಳ ಹೊಟ್ಟೆಗೆ ಸರ್ಕಾರ ಕಲ್ಲು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಮಾಜಿ ಸಚಿವ ಜನಾರ್ದರೆಡ್ಡಿ 25 ಲಕ್ಷ ಸೇರಿದಂತೆ ಇತರ ಸಂಘ ಸಂಸ್ಥೆಗಳಿಂದ ಲಕ್ಷಾಂತರ ರೂಪಾಯಿ ಶಾಲಾ ಮಕ್ಕಳ ಬಿಸಿಯೂಟಕ್ಕಾಗಿ ದೇಣಿಗೆ ಹರಿದು ಬಂದಿದ್ದು. ಜೊತೆಗೆ ಸಂಸದೆ ಶೋಭಾ ಕರಂದ್ಲಾಜೆ ಭಿಕ್ಷಾಂದೇಹಿ ಎನ್ನುವ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತೆರಳಿ ಅಕ್ಕಿಯನ್ನು ಭಿಕ್ಷೆ ಪಡೆದು ಶಾಲೆಗೆ ನೀಡಿದ್ದರು.

ಶಿಕ್ಷಣ ಇಲಾಖೆ ಎರಡೂ ಶಾಲೆಗಳಿಗೂ ನೋಟೀಸ್ ನೀಡಿ ಬಿಸಿಯೂಟಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಿತ್ತು. ಆದರೆ ಯಾವುದೇ ಕಾರಣಕ್ಕೂ ಬಿಸಿಯೂಟಕ್ಕಾಗಿ ಅರ್ಜಿ ಸಲ್ಲಿಸಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೊಳ್ಳುತ್ತಿದ್ದರು. ಆದರೆ ಇದೀಗ ನೂತನ ಸಮ್ಮಿಶ್ರ ಸರ್ಕಾರಕ್ಕೆ ಈ ಎರಡೂ ಶಾಲೆಗಳೂ ಮನವಿ ಮಾಡಿದ್ದು, ಬಿಸಿಯೂಟ ನೀಡುವಂತೆ ಮನವಿ ಮಾಡಿದೆ.

ಆ ದಿನಗಳಲ್ಲಿ ಸರ್ಕಾರದ ಅನುದಾನ ಬೇಡ ಎಂದಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರೇ ಈಗ ಬಿಸಿಯೂಟ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *