ಆಪರೇಷನ್‌ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರವಾಗಿ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ರಾಷ್ಟ್ರೀಯ ನಾಯಕರಾದ ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಕಲಬುರಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ. ಜೆಡಿಎಸ್ ಕೂಡ ಗೆದ್ದಿದೆ. ಬಿಜೆಪಿಯ ಇಡೀ ಸರ್ಕಾರವೇ ಅಲ್ಲಿ ನಿಂತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಇದ್ದರೂ ಕೂಡ ಅವರು 39, ನಾವು 33 ಸ್ಥಾನಗಳನ್ನು ಗೆದ್ದಿದ್ದೇವೆ. ಜತೆಗೆ ನಮ್ಮ ಬಂಡಾಯ ಸದಸ್ಯರೂ ಗೆದ್ದಿದ್ದಾರೆ ಎಂದರು. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ

ನಾಳೆ ಹುಬ್ಬಳ್ಳಿ, ಬೆಳಗಾವಿ ಭೇಟಿ: ನಾನು ನಾಳೆ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಹೋಗುತ್ತಿದ್ದು, ಅಲ್ಲಿ ನಮ್ಮ ಗೆದ್ದ ಹಾಗೂ ಸೋತ ಅಭ್ಯರ್ಥಿಗಳನ್ನು ಮಾತನಾಡಿಸಿಕೊಂಡು ಬರುತ್ತೇನೆ. ಕಲಬುರಗಿಗೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಬ್ಬ ರಾಷ್ಟ್ರೀಯ ನಾಯಕರಾದ ದೇವೇಗೌಡರ ಜತೆ ಮಾತನಾಡಿದ್ದಾರೆ. ಅಲ್ಲಿ ಮತದಾರರು ತಮ್ಮ ತೀರ್ಪು ನೀಡಿದ್ದಾರೆ. ಬಿಜೆಪಿಯವರು ಬಳ್ಳಾರಿ, ರಾಮನಗರ, ಚನ್ನಪಟ್ಟಣದ ಚುನಾವಣೆ ದಿನಾಂಕ ಘೋಷಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಬಿಜೆಪಿ ತನ್ನ ಅಧಿಕಾರವನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಲಬುರಗಿ ವಿಚಾರವಾಗಿ ಜೆಡಿಎಸ್ ನಾಯಕರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಜತೆ ನೇರವಾಗಿ ಮಾತನಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಏನೆಲ್ಲಾ ಬೇಕೋ, ಎಲ್ಲರಿಗೂ ಒಳ್ಳೆಯದಾಗುವ ದೃಷ್ಟಿಯಿಂದ ಅವಶ್ಯಕತೆ ಇದ್ದಾಗ ಏನು ಮಾಡಬೇಕೋ, ಅದನ್ನೆಲ್ಲಾ ನಾನು ಮಾಡುತ್ತೇನೆ. ಮೇಯರ್ ಪಟ್ಟ ನಮಗೇ ಬೇಕು ಎಂದು ಯಾರೂ ನನ್ನ ಮುಂದೆ ಬೇಡಿಕೆ ಇಟ್ಟಿಲ್ಲ. ಎರಡೂ ಪಕ್ಷಗಳು ಒಟ್ಟಿಗೆ ಆಡಳಿತ ನಡೆಸಬೇಕು ಎಂಬ ಪ್ರಸ್ತಾವನೆಯಷ್ಟೇ ನನ್ನ ಮುಂದೆ ಇದೆ ಎಂದರು.

Comments

Leave a Reply

Your email address will not be published. Required fields are marked *