ಹೆಚ್‍ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿಯ ಅಧಿಕಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಲಿದೆ.

ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ದೋಸ್ತಿಗೆ ಪೈಪೋಟಿ ಶುರುವಾಗಿದ್ದು, 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇತ್ತ ಜೆಡಿಎಸ್ ಮಾತ್ರ ರಾಜಕೀಯ ಚದುರಂಗದಾಟ ಶುರು ಮಾಡಿದೆ. ಕಲಬುರಗಿಯಲ್ಲಿ ‘ಪವರ್’ ಆಟ ಆಡಲು ಚಾಣಾಕ್ಷ ದಾಳ ಉರುಳಿಸಿರುವ ಹೆಚ್‍ಡಿಕೆ, ಮೇಯರ್ ಸ್ಥಾನ ಕೊಡೋ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಜೆಡಿಎಸ್ ಷರತ್ತು ಹಾಕಿದೆ.

ಅಷ್ಟಕ್ಕೂ ಹೆಚ್‍ಡಿಕೆ ಮೇಯರ್ ಸ್ಥಾನ ಬೇಕೆಂಬ ಅಸ್ತ್ರ ಹೂಡಿರುವ ಹಿಂದೆ ನಾನಾ ಲೆಕ್ಕಾಚಾರಗಳು ಇವೆ. ಕಲಬುರಗಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಜೆಡಿಎಸ್ ಗೆ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಪಕ್ಷ ಸಂಘಟನೆ, ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದಿಕೊಂಡ ಪ್ರಭಾವ, ವರ್ಚಸ್ಸು ಮತ್ತೆ ಗಳಿಸಿಕೊಳ್ಳಬೇಕಿದೆ. ಆದರೆ ಕೈಯಲ್ಲಿ ಅಧಿಕಾರ, ಸಂಪನ್ಮೂಲ, ಮುಖಂಡರು, ಕಾರ್ಯಕರ್ತರು ಇಲ್ಲದಿದ್ದರೆ ಇವ್ಯಾವುದೂ ಕೂಡಲ್ಲ. ಹಾಗಾಗಿಯೇ ತಾನೇ ಮೊದಲು ಅಧಿಕಾರ ಹಿಡಿಯುವ ಉಮೇದಿಗೆ ಜೆಡಿಎಸ್ ಬಂದಿದೆ. ಇದನ್ನೂ ಓದಿ: JDS ಜೊತೆ ಹೊಂದಾಣಿಕೆ ಸಾಹಸಕ್ಕೆ ಕೈಹಾಕಿ, ನಿಮ್ಮ ಕುರ್ಚಿಗೆ ಕುತ್ತು ತಂದ್ಕೋಬೇಡಿ- ಸಿಎಂಗೆ ರೇವಣ್ಣ ಸಲಹೆ

ಇತ್ತ ಹೆಚ್‍ಡಿಕೆ ಅಧಿಕಾರ ಹಿಡಿಯುವ ಆಟದಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ವೀಕ್ ನೆಸ್ ಗೊತ್ತಿದ್ದೇ ಮೇಯರ್ ಗಿರಿಗೆ ಷರತ್ತು ಹಾಕಿದ್ದಾರೆ. ಹೀಗಾಗಿಯೇ ಹೆಚ್‍ಡಿಕೆ ಅಧಿಕಾರರೂಢ ಪಕ್ಷ ಬಿಜೆಪಿ ಪರ ಒಲವು ಇಟ್ಟುಕೊಂಡಿದ್ದಾರೆ. ಆದರೆ ಜಾತ್ಯಾತೀತ ಮನಸ್ಥಿತಿಯ ದೇವೇಗೌಡರಿಗೆ ಕಾಂಗ್ರೆಸ್ ಪರ ಒಲವಿದೆ. ಬಿಜೆಪಿಗಿಂತಲೂ ಕಾಂಗ್ರೆಸ್ ಜತೆ ಕೈಜೋಡಿಸುವುದು ದೇವೇಗೌಡರ ಇಚ್ಛೆಯಾಗಿದೆ.

 

ಮೈತ್ರಿ ಸರ್ಕಾರದಲ್ಲಿ ಆಗಿರೋ ಕೆಟ್ಟ ಅನುಭವ ಗೌಡರಿಗೆ ಚೆನ್ನಾಗಿಯೇ ಗೊತ್ತು. ಆದರೂ ಕಾಂಗ್ರೆಸ್ ಕಡೆಯೇ ಗೌಡರು ಹೆಚ್ಚು ವಾಲಲು ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ಕೋಮುವಾದಿ ಪಕ್ಷ ಅನ್ನೋದು ಕಾರಣವಾಗಿದೆ. ಆದರೆ ಸದ್ಯಕ್ಕೆ ಜೆಡಿಎಸ್ ನಲ್ಲಿ ಹೆಚ್‍ಡಿಕೆ ಮಾತೇ ನಡೆಯುತ್ತಿದ್ದು, ಅವರ ನಿರ್ಧಾರವೇ ಅಂತಿಮವಾಗಿದೆ. ದೊಡ್ಡಗೌಡರಿಗೂ ಕುಮಾರಸ್ವಾಮಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ದಳಪತಿಗಳ ಒಮ್ಮತದ ನಿರ್ಧಾರ ಬಿಜೆಪಿ ಪರವೇ ಇರೋ ಸಾಧ್ಯತೆಯೇ ಹೆಚ್ಚು. ಸದ್ಯಕ್ಕೆ ಜೆಡಿಎಸ್ ಷರತ್ತಿನ ಆಡ ಆಡುತ್ತಿದ್ದು, ಸಮಯ ನೋಡಿ ಅಧಿಕೃತ ನಿರ್ಧಾರ ಪ್ರಕಟಸಲಿದೆ.

Comments

Leave a Reply

Your email address will not be published. Required fields are marked *