ಅವನು, ಅವಳಾಗಿ ಭಾರತದ ಸಿನಿಮಾ ಇತಿಹಾಸದಲ್ಲಿಯೇ ದಾಖಲೆ ಬರೆದ ಕಾಜಲ್!

ಉಡುಪಿ: ರಂಗಭೂಮಿ ನಾಟಕ- ರೆಡಿಯೋ ಜಾಕಿಯಾಗಿ ಕೆಲಸ ಮಾಡಿದ್ದ ತೃತೀಯ ಲಿಂಗಿ ಕಾಜಲ್ ಈಗ ಸ್ಯಾಂಡಲ್‍ವುಡ್ ಗೆ ಜಂಪ್ ಮಾಡಿದ್ದಾರೆ. ಲವ್ ಬಾಬಾ ಎನ್ನುವ ಚಿತ್ರಕ್ಕೆ ನಾಯಕಿ ನಟಿಯಾಗಿ ಆಯ್ಕೆಯಾಗುವ ಮೂಲಕ ಭಾರತದ ಸಿನಿಮಾ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ.

ಒಂದಾದ ಮೇಲೆ ಒಂದು ಪೋಸ್‍ನಲ್ಲಿ ಫೋಟೋ ಶೂಟ್ ಮಾಡಿಕೊಂಡಿರುವ ಕಾಜಲ್, ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಕಳೆದ 10 ವರ್ಷದಿಂದ ಉಡುಪಿಯಲ್ಲಿ ಹಲವಾರು ಕೆಲಸ ಮಾಡಿಕೊಂಡಿದ್ದಾರೆ. ಹುಟ್ಟಿದಾಗ ಪುರುಷರಂತೆ, ನಂತರ ಸ್ತ್ರೀಯಂತೆ ಸ್ವಭಾವದಲ್ಲಿ ಬದಲಾವಣೆಯಾಗಿದೆ. ಮಂಗಳಮುಖಿಯಾಗಿದ್ದವರು ಆಪರೇಷನ್ ಮಾಡಿಸಿಕೊಂಡು ಯುವತಿಯಾಗಿ ಪರಿವರ್ತನೆಗೊಂಡಿದ್ದರು. ಉಡುಪಿಯಲ್ಲಿ ಬ್ಯೂಟಿ ಪಾರ್ಲರ್, ಮೆಹಂದಿ ಹಾಕುವುದು, ರೆಡಿಯೋ ಜಾಕಿಯಾಗಿ ಕೆಲಸ ಮಾಡಿಕೊಂಡಿದ್ದ ಈಕೆಗೆ ಈಗ ಸಿನಿಮಾವೊಂದರಿಂದ ಆಫರ್ ಬಂದಿದೆ.

ಮೈಸೂರು ಮೂಲದ ಚಂದನ್ ಗೌಡ ಅವರು `ಲವ್ ಬಾಬಾ’ ಎನ್ನುವ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತೃತೀಯ ಲಿಂಗಿ ಕಾಜಲ್ ಅವರನ್ನು ನಾಯಕಿಯನ್ನಾಗಿ ಸೆಲೆಕ್ಟ್ ಮಾಡಿದ್ದಾರೆ. ಮೂರು ಹೀರೋಗಳ ಜೊತೆ ಕಾಜಲ್ ನಟನೆ ಮಾಡಲಿದ್ದಾರೆ. ಆರಂಭದಲ್ಲಿ ಮುಂಬೈನಲ್ಲಿ ಲೈವ್ ಬ್ಯಾಂಡ್ ಡಾನ್ಸರ್ ಆಗಿದ್ದ ಇವರು ನಂತರ ಉಡುಪಿಗೆ ಬಂದು ಬ್ಯೂಟಿಷಿಯನ್ ಕೆಲಸ ಮಾಡಿದ್ದಾರೆ. ಮಂಗಳೂರಿನ ಸಾರಂಗ್ ಎಫ್‍ಎಂನಲ್ಲಿ ನಿರೂಪಕಿಯಾಗಿ, ಉಡುಪಿಯ ರಂಗಭೂಮಿ ತಂಡದ ನಾಟಕದಲ್ಲಿ ನಟನೆ ಮಾಡಿದ್ದಾರೆ. ಇದೀಗ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ನಮ್ಮದು ಜೀವನವೇ ಕಷ್ಟ. ನಟನೆ ನನಗೆ ಕಷ್ಟ ಅಂತ ಅನಿಸಿಯೇ ಇಲ್ಲ. ನಾಟಕದಲ್ಲಿ ನಟಿಸಿದ್ದರಿಂದ ಫಿಲಂನಲ್ಲಿ ನಟಿಸೋದು ಕಷ್ಟವಾಗುವುದಿಲ್ಲ. ನನ್ನಂತ ಟ್ರಾನ್ಸ್ ಜಂಡರ್ ಗೆ ಅವಕಾಶ ಕೊಟ್ಟ ನಿರ್ದೇಶಕರಿಗೆ ನಾನು ಚಿರಋಣಿ. ಬಾರ್ ನಲ್ಲಿ ಡಾನ್ಸ್ ಮಾಡಿ ನನ್ನ ವೃತ್ತಿ ಆರಂಭಿಸಿದ್ದೆ. ಈಗ ಈ ಫೀಲ್ಡ್. ಬೇರೆ ಬೇರೆ ಅವಕಾಶಗಳು ಸಿಕ್ಕರೆ ನಾನು ಅವುಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಕಾಜಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಯುವಕರ ತಂಡ ಈ ಚಿತ್ರವನ್ನು ಕಟ್ಟಲು ಹೊರಟಿದೆ. ಚಿತ್ರಕ್ಕೆ ಸಂಗೀತ, ಛಾಯಾಗ್ರಹಣವನ್ನು ಹೊಸಬರ ತಂಡ ಮಾಡುತ್ತಿದ್ದು, ಈ ಚಿತ್ರ ವಿಭಿನ್ನ ಕಥೆಯನ್ನು ಹೊಂದಿದೆ. ಮಕ್ಕಳಿಂದ ಹಿರಿಯರ ತನಕ ಕಥೆ ಇಷ್ಟವಾಗುತ್ತದೆ ಎಂದು ನಿರ್ದೇಶಕ ಚಂದನ್ ಗೌಡ ಹೇಳಿದ್ದಾರೆ. ಒಬ್ಬ ನಾಯಕ ನಟನಾಗಿ ಅಬ್ದುಲ್ ರೆಹಮಾನ್, ಕಾಮಿಡಿಗೆ ರವಿ ಬಣ್ಣ ಹಚ್ಚಲಿದ್ದಾರೆ.

ಸುಮಾರು ಅರ್ಧ ಕೋಟಿ ರೂ. ಬಜೆಟ್‍ನಲ್ಲಿ ಚಿತ್ರ ರೆಡಿ ಮಾಡುತ್ತಿದ್ದು, ಮೈಸೂರಿನ ಯುವಕರ ತಂಡ `ಲವ್ ಬಾಬಾ’ದ ಹಿಂದೆ ಇದೆ. ಮಂಗಳೂರು, ಬೆಂಗಳೂರು, ಮೈಸೂರಲ್ಲಿ ಚಿತ್ರೀಕರಣವಿರುತ್ತದೆ. ನಾಲ್ಕು ಸಾಂಗ್ ಇರುವ ಕಾಮಿಡಿ, ಲವ್ ಹಾಗೂ ಡ್ರಾಮ ಮೂವಿ ಇದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಹೀರೋಯಿನ್ ಆಗಿ ನಟಿಸುತ್ತಿದ್ದು, ಇದು ದಾಖಲೆಯಾಗಲಿದೆ. ಈ ಚಿತ್ರದ ಮೂಲಕ ಲವ್ ಬಾಬಾ ಚಿತ್ರ ತಂಡ ಹೊಸ ಪ್ರಯೋಗ ಮಾಡಲು ಹೊರಟಿದೆ.

Comments

Leave a Reply

Your email address will not be published. Required fields are marked *