ಪತ್ನಿ ಜೊತೆ ಒಂದೇ ಸಿನ್ಮಾ 10 ಬಾರಿ ನೋಡಿದೆ: ಸುದೀಪ್

ಮುಂಬೈ: ಒಂದೇ ಸಿನಿಮಾವನ್ನು ಪತ್ನಿ ಜೊತೆ ಹತ್ತು ಬಾರಿ ನೋಡಿದ್ದೇನೆ ಎಂದು ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಸುದೀಪ್ ಸಂದರ್ಶನದಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುತ್ತಾ, ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಸಿನಿಮಾವನ್ನು ಚಿತ್ರಮಂದಿರದಲ್ಲಿ 10-11 ಬಾರಿ ನೋಡಿದ್ದೇನೆ. ಯಾಕಂದರೆ, ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ವಾಪಸ್ ಬರುತ್ತಿದ್ದೆ ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ನಟನೆ, ಡ್ಯಾನ್ಸ್, ಸ್ಟೈಲ್ ಎಲ್ಲವೂ ನನಗೆ ಇಷ್ಟವಾಗಿತ್ತು. ಆ ನಂತರ ನಾನು ಯಾರನ್ನೂ ಅಷ್ಟೊಂದಾಗಿ ದ್ವೇಷಿಸಿಲ್ಲ. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ಪತ್ನಿ ನನ್ನ ಕೈಯನ್ನು ಚಿವುಟುತ್ತಿದ್ದಳು. ಇದರಿಂದ ಕೋಪಗೊಳ್ಳುತ್ತಿದ್ದೆ. ಯಾಕಂದರೆ ನಾನೂ ಒಬ್ಬ ನಟ. ಅಷ್ಟರಮಟ್ಟಿಗೆ ಆಕೆ ಹೃತಿಕ್ ಅಭಿಮಾನಿಯಾಗಿದ್ದಾಳೆ ಎಂದು ನಕ್ಕುಬಿಟ್ಟರು. ಹೀಗಾಗಿ ಕಹೋನಾ ಪ್ಯಾರ್ ಹೈ ಚಿತ್ರ ನನ್ನ ಜೀವನದ ಪುಸ್ತಕದಲ್ಲಿ ಒಂದು ಪುಟ ಇದ್ದಂತೆ. ಹಾಗೆಯೇ ಆ ಚಿತ್ರದ ಯಶಸ್ಸಿಗೆ ನಮ್ಮ ಕೊಡುಗೆಯೂ ತುಂಬಾ ಇದೆ ಎಂದು ಹೇಳಿ ನಸುನಕ್ಕರು.

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಹೃತಿಕ್ ಜೊತೆ ನಟಿಸುತ್ತೇನೆ. ಇದೂವರೆಗೂ ಹೃತಿಕ್ ಅವರನ್ನ ಭೇಟಿಯಾಗಿಲ್ಲ ಎಂದು ತಿಳಿಸಿದರು.

ರಣ್‍ವೀರ್ ಸಿಂಗ್ ಜೊತೆ ವಿಲನ್ ಆಗಿ ನಟಿಸ್ತೀರಾ ಎಂದು ಅಭಿಮಾನಿಯೊಬ್ಬರು ಕೇಳಿದರು. ಸಿಂಬಾ ಸಿನಿಮಾ ಚಿತ್ರೀಕರಣ ವೇಳೆ ರಣ್‍ವೀರ್ ಸಿಂಗ್ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಅಂದು ಪೈಲ್ವಾನ್ ಚಿತ್ರೀಕರಣ ನಡೆಯುತ್ತಿತ್ತು. ನನ್ನನ್ನು ವಿಲನ್ ಆಗಿಯೇ ನೋಡಲು ಅವರು ಇಷ್ಟಪಡುತ್ತಾರೆ ಅನ್ನಿಸುತ್ತದೆ ಎಂದರು.

Comments

Leave a Reply

Your email address will not be published. Required fields are marked *