Breaking-ಕಬ್ಜ@25: ಯಶಸ್ಸಿನ ಬೆನ್ನಲ್ಲೇ ನಾಳೆ ಗುಡ್ ನ್ಯೂಸ್ ಕೊಡ್ತಾರಂತೆ ಆರ್.ಚಂದ್ರು

ಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಹಾಗೂ ಶಿವರಾಜ್ ಕುಮಾರ್ (Shivraj Kumar) ಮೂವರು ಸ್ಟಾರ್ ಗಳ ಅಪರೂಪದ ಕಾಂಬಿನೇಷನ್ ಸಿನಿಮಾ ‘ಕಬ್ಜ’ (Kabzaa) ಯಶಸ್ವಿ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗಿದೆ. ಕಳೆದ ಎರಡು ವಾರಗಳಿಂದ ರಿಲೀಸ್ ಆದ ಚಿತ್ರಗಳಿಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗದೇ ಇರುವ ಕಾರಣದಿಂದಾಗಿ ಕಬ್ಜ ಮತ್ತೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಈ ಖುಷಿಯಲ್ಲೇ ನಾಳೆ ವಿಶೇಷ ಸುದ್ದಿಯೊಂದನ್ನು ನೀಡುವುದಾಗಿ ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಚಂದ್ರು, ‘ನನ್ನ ಕನಸಿನ ಸಿನಿಮಾ ಕಬ್ಜ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ದೇಶದ ಸಮಸ್ತ ನೋಡುಗರಿಗೆ ಅದರಲ್ಲೂ ವಿಶೇಷವಾಗಿ ಕನ್ನಡಿಗರಿಗೆ ಮತ್ತು ನನ್ನ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗಾಗಿ ನಾಳೆ ವಿಶೇಷ ಸುದ್ದಿಯೊಂದನ್ನು ನೀಡಲಿದ್ದೇನೆ’ ಎಂದರು.

ನಾಳೆ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿರುವ ಚಂದ್ರು, ಈ ಸಂದರ್ಭದಲ್ಲಿ  ಹೊಸ ಯೋಜನೆ ಮತ್ತು ಯೋಚನೆ ಕುರಿತು ಮಾತನಾಡಲಿದ್ದಾರಂತೆ. ಹೊಸ ಸಿನಿಮಾ ಕುರಿತು ಮಾತನಾಡಲಿದ್ದಾರಾ ಅಥವಾ ಮತ್ತೇನಾದರೂ ವಿಶೇಷವಾದ ವಿಷಯವನ್ನು ಹಂಚಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ನಿರ್ದೇಶನದ ‘ಕಬ್ಜ’ ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ಓಟಿಟಿಯಲ್ಲಿ ಕಬ್ಜ ಲಭ್ಯವಾಗಲಿದೆ. ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಸಿನಿಮಾ ರಿಲೀಸ್ ಆಗಿತ್ತು. ಮೊನ್ನೆಗೆ ಕಬ್ಜ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆಯೂ ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಾಗಲಿದೆ.

ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.