ಪ್ರತಾಪ್‌ಸಿಂಹನಂಥ ರಾಷ್ಟ್ರಭಕ್ತ, ಹಿಂದುತ್ವವಾದಿಯನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ: ಈಶ್ವರಪ್ಪ

ಶಿವಮೊಗ್ಗ: ಪ್ರತಾಪ್‌ಸಿಂಹನಂತಹ (Pratap Simha) ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ (K.S.Eshwarappa) ಹೇಳಿದರು.

ಪಾರ್ಲಿಮೆಂಟ್‌ನಲ್ಲಿ ನಡೆದ ದಾಳಿ ವಿಚಾರವಾಗಿ ಮಾತನಾಡಿದ ಅವರು, ಪಾರ್ಲಿಮೆಂಟ್‌ನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯಿದ್ದರೂ ನಡೆಸಿದ ದುಷ್ಕೃತ್ಯ ನೋಡಿದರೆ ಆಶ್ಚರ್ಯ, ನೋವು ಎರಡು ಆಗುತ್ತದೆ. ಈ ಭದ್ರತಾ ವೈಫಲ್ಯದ ಕುರಿತು ಬಿಗಿಯಾದ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ನಿಲುವು ತೆಗೆದುಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗ ಕ್ರಾಂತಿಕಾರಿ ಪುಸ್ತಕಗಳಿಂದ ಪ್ರಭಾವಿತನಾಗಿದ್ದ, ಸಮಾಜ ಸೇವೆ ಮಾಡುವ ಹಂಬಲವಿತ್ತು – ಮನೋರಂಜನ್‌ ತಂದೆ ಬೇಸರ

ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆದಾಗ ಶಾಸಕರ ಕುರ್ಚಿಯ ಮೇಲೆ ಹೋಗಿ ಯಜಮಾನ ‌ಮನುಷ್ಯ ಕುಳಿತಿದ್ದರು. ಕೆಲವು ಆಚಾತುರ್ಯಗಳು ನಡೆಯುತ್ತವೆ. ಬೇಕು ಅಂತ ನಡೆಸುವುದಕ್ಕೂ, ಹಾಗೆಯೇ ಆಗುವುದಕ್ಕೂ ವ್ಯತ್ಯಾಸ ಇದೆ. ಪ್ರತಾಪ್‌ಸಿಂಹನಂತಹ ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಯಾರು ಖಂಡಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ನವರಿಗೆ ಉದ್ಯೋಗವಿಲ್ಲದೆ ಹೇಳಿಕೆ ನೀಡುತ್ತಾರೆ. ಮಥುರಾದಲ್ಲಿ ಸರ್ವೆ ಮಾಡಲು ಬಂದಿರುವ ಕೋರ್ಟ್ ಆದೇಶವನ್ನು ಒಬ್ಬ ಕಾಂಗ್ರೆಸ್ಸಿಗನಾದರೂ ಸ್ವಾಗತ ಮಾಡುತ್ತಾನಾ? ಕಾಂಗ್ರೆಸಿಗರಿಗೆ ಒಳಗೊಳಗೆ ಒಂದು ರೀತಿಯ ನೋವು. ಮುಸ್ಲಿಮರಿಗೆ ನೋವಾದರೆ ಇವರಿಗೆ ನೋವು ಎಂದು ಕುಟುಕಿದರು. ಇದನ್ನೂ ಓದಿ: ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ: ಬಿಕೆ ಹರಿಪ್ರಸಾದ್

ರಾಷ್ಟ್ರಭಕ್ತ ಮುಸಲ್ಮಾನರು ಕೋರ್ಟ್ ಆದೇಶವನ್ನು ಸ್ವಾಗತಿಸುತ್ತಾರೆ. ರಾಷ್ಟ್ರದ್ರೋಹಿ ಮುಸಲ್ಮಾನರು ಕೋರ್ಟ್ ಆದೇಶವನ್ನು ವಿರೋಧಿಸುತ್ತಾರೆ. ರಾಷ್ಟ್ರದ್ರೋಹಿ ಮುಸಲ್ಮಾನರಿಗೆ ನೋವಾದಷ್ಟೇ ಕಾಂಗ್ರೆಸಿಗರಿಗೂ ನೋವಾಗಿದೆ ಎಂದು ಟೀಕಿಸಿದರು.

ಶಾಸಕರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್‌.ಟಿ.ಸೋಮಶೇಖರ್ ಊಟಕ್ಕೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೇವೆ ಎಂದಿದ್ದಾರೆ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಹೆಚ್ಚಿನ ವಿವರಗಳು ನನಗೇನು ಗೊತ್ತಿಲ್ಲ. ಬೇರೆ ಪಕ್ಷದವರ ಜೊತೆಗೆ ಊಟಕ್ಕೆ ಹೋಗುವುದರಲ್ಲಿ ತಪ್ಪೇನೂ ಇಲ್ಲ ಎಂದರು.