5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ಮೇಲೆ ಶೂಟೌಟ್

– ಬೆಂಗಳೂರಲ್ಲಿ ಕಾಪ್ ಗುಂಡೇಟು ತಿಂದ ಶಾರ್ಪ್ ಶೂಟರ್

ಬೆಂಗಳೂರು: ಸಿಲಿಕಾನ್ ಸಿಟಿಯ ಕೆ.ಜಿ ಹಳ್ಳಿ ಪೊಲೀಸರು ಮೋಸ್ಟ್ ವಾಟೆಂಡ್ ಕ್ರಿಮಿನಲ್, ಶಾರ್ಪ್ ಶೂಟರ್ ಕಂ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿಶೀಟರ್ ಡೈನಮಿಕ್ ಖಲೀಲ್ ಬಂಧಿತ ಆರೋಪಿಯಾಗಿದ್ದು, ಕೆ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ಚಂದ್ರಿಕಾ ಫ್ಯಾಕ್ಟರಿ ಬಳಿ ಶೂಟೌಟ್ ನಡೆದಿದೆ. ರೌಡಿಶೀಟರ್ ಖಲೀಲ್ ಕಳೆದ 5 ವರ್ಷಗಳಿಂದ ಹಲವು ಅಪರಾಧ ಕೃತ್ಯ ಎಸಗಿ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಅಂಡರ್ ವರ್ಲ್ಡ್ ಕ್ರಿಮಿನಲ್‍ಗಳ ಜೊತೆಯು ಆರೋಪಿ ಲಿಂಕ್ ಇಟ್ಟುಕೊಂಡಿದ್ದನು ಎನ್ನಲಾಗಿದೆ.

ಕಳೆದ 6 ತಿಂಗಳ ಹಿಂದೆ ರೌಡಿ ಚಟ್ನಿ ಸಲೀಂ, ಝುಬೇರ್ ಮೇಲೆ ಶೂಟ್ ಮಾಡಿ ಖಲೀಲ್ ಪರಾರಿಯಾಗಿದ್ದನು. ವಾರೆಂಟ್ ಜಾರಿಯಾಗಿದ್ರೂ ಕೋರ್ಟಿಗೆ ಹಾಜರಾಗಿರಲಿಲ್ಲ. ಹೀಗಾಗಿ ಈತನಿಗಾಗಿ ಕೆ.ಜೆ ಹಳ್ಳಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಚಂದ್ರಿಕಾ ಫ್ಯಾಕ್ಟರಿ ಬಳಿ ಖಲೀಲ್ ಇರುವು ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೆ.ಜೆ ಹಳ್ಳಿ ಇನ್ಸ್‌ಪೆಕ್ಟರ್ ವಿಜಯ್ ಸಾರಥಿ ನೇತೃತ್ವದ ಟೀಮ್ ಆತನನ್ನು ಹಿಡಿಯಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಖಲೀಲ್ ತನ್ನ ಪಿಸ್ತೂಲ್‍ನಿಂದ ಪೊಲೀಸರ ಮೇಲೆಯೇ ಫೈರ್ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ವಿಜಯ್ ಸಾರಥಿ ಖಲೀಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈತನ ಮೇಲೆ ಒಟ್ಟು 9 ಪ್ರಕರಣಗಳಿದೆ. ಕೆ.ಜೆ ಹಳ್ಳಿ ನಿವಾಸಿಯಾಗಿರುವ ಖಲೀಲ್ 18 ವರ್ಷಕ್ಕೆ ಮೊದಲ ಕೊಲೆ ಮಾಡಿದ್ದನು. ಈತನ ವಿರುದ್ಧ 4 ಕೊಲೆ ಯತ್ನ ಪ್ರಕರಣ, 3 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 1 ದೊಂಬಿ ಮತ್ತು ಅಪರಾಧಿಕ ಸಂಚಿನ ಪ್ರಕರಣಗಳಿವೆ. ಮಂಗಳೂರಿನ ಕುಖ್ಯಾತ ಡಾನ್ ರಷೀದ್ ಮಲ್ಬಾರಿ ಜೊತೆಗೂ ರೌಡಿ ಖಲೀಲ್ ಗುರುತಿಸಿಕೊಂಡಿದ್ದನು. ಕಳೆದ 5 ವರ್ಷದಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದನು. ಅಲ್ಲದೆ ತನ್ನ ಬಳಿ ಪಾಯಿಂಟ್ 6 ಎಂಎಂ ಇಟಲಿ ಮೇಡ್ ಪಿಸ್ತೂಲ್ ಕೂಡ ಇಟ್ಟುಕೊಂಡು ಓಡಾಡುತ್ತಿದ್ದನು.

ಇಂದು ಅದೇ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದಾಗ ಪೊಲೀಸರು ಖಲೀಲ್ ಎರಡೂ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *