7 ಹಂತಗಳಲ್ಲಿ ದೀದಿ ಭದ್ರಕೋಟೆ ಛಿದ್ರ: ಕೈಲಾಸ್ ವಿಜಯವರ್ಗೀಯ

– ಮತ್ತಿಬ್ಬರು ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆದಿದೆ. ಅದೇ ರೀತಿ 7 ಹಂತಗಳಲ್ಲಿ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಹೇಳಿದ್ದಾರೆ.

ನವದೆಹಲಿಯಲ್ಲಿ ಮುಕುಲ್ ರಾಯ್ ಪುತ್ರ ಸುಬ್ರಂಗ್ಶು ರಾಯ್ ಸೇರಿದಂತೆ ಟಿಎಂಸಿಯ ಇಬ್ಬರು ಶಾಸಕರು ಹಾಗೂ 50ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಇಂದು ಬಿಜೆಪಿಗೆ ಸೇರ್ಪಡೆಯಾದರು. ಅಷ್ಟೇ ಅಲ್ಲದೆ ಎಡಪಕ್ಷದ ಶಾಸಕರೊಬ್ಬರು ಕೂಡ ಬಿಜೆಪಿ ಮನೆ ಪ್ರವೇಶ ಮಾಡಿದ್ದಾರೆ.

ನಮ್ಮ ಸಂಪರ್ಕದಲ್ಲಿ ಮತ್ತಿಬ್ಬರು ಶಾಸಕರು ಇದ್ದಾರೆ. ಅವರು ಕೂಡ ಕೆಲವೇ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಕೈಲಾಸ್ ವಿಜಯವರ್ಗೀಯ ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕರೊಬ್ಬರು, ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸಿರುವ ವಾತಾವರಣ ಇತ್ತು. ಹೀಗಾಗಿ ಪಕ್ಷ ಬಿಡಬೇಕಾಯಿತು ಎಂದು ಹೇಳಿದ್ದಾರೆ.

ಟಿಎಂಸಿಯ ಮಹಿಳಾ ಕೌನ್ಸಿಲರ್‌ಗಳು ನಿನ್ನೆಯೇ ದೆಹಲಿಗೆ ಆಗಮಿಸಿದ್ದರು. ಈ ನಿಟ್ಟಿನಲ್ಲಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಜೊತೆಗೆ ನಮಗೆ ಮುನಿಸಿಕೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದ 18 ಸ್ಥಾನಗಳನ್ನು ಪಡೆದಿದೆ. ಈ ಗೆಲುವು ನಮ್ಮನ್ನು ಬಿಜೆಪಿ ಸೇರುವಂತೆ ಪ್ರೇರಣೆ ನೀಡಿತು. ರಾಜ್ಯದ ಜನರು ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಸೇರಲು ಮುಂದಾದ ಕೌನ್ಸಿಲರ್‍ಗಳು ತಿಳಿಸಿದ್ದಾರೆ.

ಬಿಜೆಪಿಯು 2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

Comments

Leave a Reply

Your email address will not be published. Required fields are marked *