ಪಿಎಸ್‍ಎಲ್ ಆರಂಭಕ್ಕೆ 3 ದಿನ ಇರೋವಾಗ ಬಾಂಬ್ ಸ್ಫೋಟ – ಪಾಕಿಗೆ ಮತ್ತೆ ಮುಖಭಂಗ

ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‍ಎಲ್) ಆರಂಭಗೊಳ್ಳಲು ಮೂರು ದಿನ ಇರುವಂತೆಯೇ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟಗೊಂಡು 7 ಮಂದಿ ಸಾವನ್ನಪ್ಪಿದ್ದಾರೆ.

ನಡು ರಸ್ತೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ಸಾಗುತ್ತಿದ್ದಾಗ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಗೊಳಿಸುವ ಮೂಲಕ ಈ ಕೃತ್ಯ ಎಸಗಿದ್ದು 25ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ವಿಶೇಷ ಏನೆಂದರೆ ಇದೇ 20ರಿಂದ ಸೂಪರ್ ಲೀಗ್ ಕ್ರಿಕೆಟ್ ಆರಂಭಗೊಳ್ಳಲಿದೆ. ಒಟ್ಟು 6 ತಂಡಗಳು ಈ ಟೂರ್ನಿಯಲ್ಲಿ ಆಡಲಿದ್ದು 26 ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಕ್ವೆಟ್ಟಾ ಗ್ಲಾಡಿಯೆಟರ್ಸ್ ಮತ್ತು ಇಸ್ಲಾಮಾಬಾದ್ ಯುನೈಟೆಡ್ ತಂಡಗಳ ಮಧ್ಯೆ ಗುರುವಾರ ನಡೆಯಲಿದೆ.

ಪಾಕಿಸ್ತಾನದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ವಿದೇಶಿ ಕ್ರಿಕೆಟಿಗರು ಪ್ರವಾಸ ಕೈಗೊಳ್ಳುತ್ತಿರಲಿಲ್ಲ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ದುಬೈನಲ್ಲಿ ಕ್ರಿಕೆಟ್ ಆಯೋಜನೆ ಮಾಡುತ್ತಿತ್ತು. ಆದರೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಶ್ರೀಲಂಕಾ ಮೊದಲ ಬಾರಿಗೆ ಪಾಕ್ ಪ್ರವಾಸ ಕೈಗೊಂಡಿತ್ತು. ಬಳಿಕ ಜನವರಿಯಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು.

ವಿಶೇಷ ಏನೆಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಸಮುದಾಯವನ್ನು ಉದ್ದೇಶಿಸಿ ಪಾಕಿಸ್ತಾನ ಉಗ್ರರ ತವರು ನೆಲವಲ್ಲ. ನಾವು ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ರೀತಿ ಹೇಳಿದ ದಿನವೇ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಪಿಎಸ್‍ಎಲ್ ಹಿನ್ನೆಲೆಯಲ್ಲಿ ಈಗಾಗಲೇ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ.

ಉಗ್ರರಿಗೆ ಬಹಿರಂಗವಾಗಿ ಸಹಕಾರ ನೀಡುತ್ತಿರುವ ಪಾಕಿಸ್ತಾನ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್)ನ ಕಪ್ಪು ಪಟ್ಟಿಗೆ ಸೇರ್ಪಡೆಯಾಗುತ್ತಾ? ಇಲ್ಲವೋ ಎನ್ನುವುದು ಇಂದು ನಿರ್ಧಾರವಾಗಲಿದೆ.

ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಎಫ್‍ಎಟಿಎಫ್ ಸಭೆ ಪ್ಯಾರಿಸ್ ನಲ್ಲಿ ನಡೆಯುತ್ತಿದೆ. ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಶನ್ 1267 ಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತರಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾನೆಯ ಹಣಕಾಸು ವ್ಯವಸ್ಥೆ(ಟೆರರ್ ಫಂಡಿಂಗ್)ಯ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಸ್ಪಷ್ಟಪಡಿಸಿಲ್ಲ ಎಂದು ಎಫ್‍ಎಟಿಎಫ್ ಪಾಕಿಸ್ತಾನವನ್ನು ತಿವಿದಿತ್ತು.

ಭಾರತ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತಾ ಬಂದಿದ್ದರೂ ಚೀನಾ, ಟರ್ಕಿ, ಮಲೇಷ್ಯಾ ಗಳು ಪಾಕಿಸ್ತಾನದ ಪರ ಬೆಂಬಲ ವ್ಯಕ್ತಪಡಿಸುತ್ತಿವೆ. ಈಗ ಬೂದು ಪಟ್ಟಿಯಲ್ಲಿರುವ ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಆರ್ಥಿಕವಾಗಿ ಬಹಳಷ್ಟು ಹೊಡೆತ ತಿನ್ನಲಿದೆ.

Comments

Leave a Reply

Your email address will not be published. Required fields are marked *