ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 28 ಸಾವಿರ ರೂ. ದಾನ ಮಾಡಿದ ನಟಿ ಜೂಹಿ ಚಾವ್ಲಾ ಮಗ

ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ 16 ವರ್ಷದ ಮಗ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಮನನೊಂದು ತನ್ನ ಪಾಕೆಟ್‍ ಮನಿಯಿಂದ 28 ಸಾವಿರ ರೂ. ದಾನ ಮಾಡಿದ್ದಾರೆ.

ಜೂಹಿ ಚಾವ್ಲಾ ಅವರ ಮಗ ಅರ್ಜುನ್ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಮನನೊಂದು ಸಹಾಯ ಮಾಡಿದ್ದಾರೆ. ಅರ್ಜುನ್ ತಮ್ಮ ಪಾಕೆಟ್ ಮನಿಯಿಂದ 300 ಪೌಂಡ್ ಅಂದರೆ 28,000 ರೂ. ಸಹಾಯಧನ ನೀಡಿದ್ದಾರೆ. ಸದ್ಯ ಅರ್ಜುನ್ ಲಂಡನ್‍ನ ಬೋರ್ಡಿಂಗ್ ಸ್ಕೂಲ್‍ನಲ್ಲಿ ಓದುತ್ತಿದ್ದಾರೆ. ಇದನ್ನೂ ಓದಿ: ಬೆತ್ತಲೆ ಫೋಟೋ ಮಾರಾಟ ಮಾಡಿ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 5 ಕೋಟಿ ಸಂಗ್ರಹಿಸಿದ ಯುವತಿ

ಮಗನ ಬಗ್ಗೆ ಮಾತನಾಡಿದ ನಟಿ ಜೂಹಿ, ಆಸ್ಟ್ರೇಲಿಯಾ ಕಾಡ್ಗಿಚ್ಚಿನಿಂದ ಸುಮಾರು 50 ಕೋಟಿ ಪ್ರಾಣಿಗಳು ಸುಟ್ಟು ಭಸ್ಮವಾಗಿದೆ ಎಂದು ನನ್ನ ಮಗ ಹೇಳಿದ್ದು ನನಗೆ ನೆನಪಿದೆ. ಈ ವಿಷಯ ಹೇಳುವಾಗ ಅರ್ಜುನ್, ನೀವು ಇದಕ್ಕಾಗಿ ಏನು ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದನು. ಆಗ ನಾನು ನಮ್ಮ ದೇಶದ ಕಾವೇರಿ ಕಾಲಿಂಗ್ ಯೋಜನೆ ಮೂಲಕ ನಮ್ಮ ದೇಶದಲ್ಲಿ ಸಸಿಗಳನ್ನು ನೆಡಲು ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದೆ ಎಂದರು.

ನನ್ನ ಮಗ ಈ ರೀತಿ ಪ್ರಶ್ನೆ ಕೇಳಿದ ಬಳಿಕ ಆತ ನನ್ನ ಬಳಿ ಬಂದು, ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ನಾನು ನನ್ನ ಪಾಕೆಟ್ ಮನಿಯಿಂದ 300 ಪೌಂಡ್(18,000ರೂ.) ಕಳುಹಿಸಿದ್ದೇನೆ. ಆ ಹಣ ಸರಿಯಾದ ಜಾಗಕ್ಕೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದನು. ನನ್ನ ಮಗನ ಮಾತು ಕೇಳಿ ನನಗೆ ತುಂಬಾ ಖುಷಿಯಾಯಿತು. ಜೊತೆಗೆ ನಾನು ದೇವರಿಗೆ ಧನ್ಯವಾದ ಕೂಡ ತಿಳಿಸಿದೆ ಎಂದು ಜೂಹಿ ಹೇಳಿದ್ದಾರೆ.

ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಈವರೆಗೆ ಸುಮಾರು 25 ಮಂದಿ ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಲಕ್ಷಗಟ್ಟಲೆ ಕಾಡು ಪ್ರಾಣಿಗಳು, ಪಕ್ಷಿಗಳು ಜೀವ ಕಳೆದುಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ `ಪ್ರೇ ಫಾರ್ ಆಸ್ಟ್ರೇಲಿಯಾ’ ಎಂದು ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಫೋಟೋಗಳು, ಸುಟ್ಟು ಕರಕಲಾಗಿರುವ ಪ್ರಾಣಿಗಳ ಮೃತದೇಹಗಳ ಫೋಟೋಗಳು ಹಾಗೂ ಸಹಾಯಕ್ಕಾಗಿ ಜನರ ಕಾಲು ಹಿಡಿದ ಕಾಂಗರುಗಳು ಹಾಗೂ ಇತರೆ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *