ಮಂಗ್ಳೂರು ಗೋಲಿಬಾರ್ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ: ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ

ಮಂಗಳೂರು: ಪೌರತ್ವ ಮಸೂದೆ ಜಾರಿಯ ವಿರುದ್ಧ ಡಿ. 19ರಂದು ಮಂಗಳೂರಿನಲ್ಲಿ ನಡೆದ ಗೊಲೀಬಾರ್ ರಾಜ್ಯದ ಬಿಜೆಪಿ ಸರ್ಕಾರದ ಪ್ರಾಯೋಜಿತ ಹತ್ಯೆ, ಪೊಲೀಸರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿ ಅಮಾಯಕ ಪ್ರತಿಭಟನಾಕಾರರನ್ನು ಹತ್ಯೆ ಮಾಡಿಸಿದೆ ಎಂದು ಡಿವೈಎಫ್‍ಐನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಆರೋಪಿಸಿದ್ದಾರೆ.

ಮಂಗಳೂರಿಗೆ ಆಗಮಿಸಿದ ಡಿವೈಎಫ್‍ಐನ ರಾಷ್ಟ್ರೀಯ ನಿಯೋಗ, ಗೊಲೀಬಾರ್ ನಡೆದ ಸ್ಥಳಕ್ಕೆ ತೆರಳಿ ಪರಿಸೀಲನೆ ನಡೆಸಿತು. ಬಳಿಕ ಗೊಲೀಬಾರ್ ನಲ್ಲಿ ಮೃತಪಟ್ಟ ಜಲೀಲ್ ಕಂದುಕ ಹಾಗೂ ನೌಶೀನ್ ಕುದ್ರೋಳಿಯವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್, ಪೊಲೀಸ್ ಗೊಲೀಬಾರ್ ಗೆ ಬಲಿಯಾದವರು ಅಮಾಯಕರು. ಮಂಗಳೂರಿನ ಪೊಲೀಸ್ ಆಯುಕ್ತರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರದ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಪೊಲೀಸರು ಘಟನೆಯ ಎಫ್‍ಐಆರ್ ನಲ್ಲಿ ಅಪರಿಚಿತ ಮುಸ್ಲಿಂ ಯುವಕರು ಎಂದು ದಾಖಲಿಸಿಕೊಂಡಿರೋದು ದೇಶದ ಬೇರೆಲ್ಲೂ ಇಲ್ಲ. ಧರ್ಮದ ಆಧಾರದಲ್ಲಿ ಪೊಲೀಸರು ಹಾಗೂ ರಾಜ್ಯ ಸರ್ಕಾರ ಯುವ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪೊಲೀಸರು ನಡೆಸಿದ ಗೊಲೀಬಾರ್ ಪ್ರಕರಣವನ್ನು ಸಿಓಡಿಗೆ ನೀಡಿದ್ದು ಸರಿಯಲ್ಲ. ಇದರಿಂದ ನ್ಯಾಯ ಸಿಗದು. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕೆಂದರು.

ಗೊಲೀಬಾರ್ ನಲ್ಲಿ ಮೃತರಾದ ಇಬ್ಬರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಅಮಾಯಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕೆಂದು ಎಂದು ಇದೇ ವೇಳೆ ಆಗ್ರಹಿಸಿದರು.

ಡಿವೈಎಫ್‍ಐ ರಾಷ್ಟ್ರೀಯ ನಿಯೋಗದಲ್ಲಿ ಡಿವೈಎಫ್‍ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೇರಳ ರಾಜ್ಯಾಧ್ಯಕ್ಷ ಎ.ಸತೀಶ್, ಕಾರ್ಯದರ್ಶಿ ಎ.ಎ.ರಹೀಂ,ಕೇಂದ್ರ ಸಮಿತಿಯ ಸದಸ್ಯರಾದ ಎಸ್.ಕೆ.ಸಾಜಿಶ್, ಯು.ಕೆ.ಜ್ಞಾನೇಶ್ ಕುಮಾರ್ ಹಾಗೂ ಸ್ಥಳೀಯ ನಾಯಕರು ಜೊತೆಗಿದ್ದರು.

Comments

Leave a Reply

Your email address will not be published. Required fields are marked *