ರಾಯಚೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೀ ಚರ್ಚೆ, ಕಾಲೆಳೆಯೋದೆ ಹೆಚ್ಚಾಗುತ್ತಿದೆ. ಆದ್ರೆ ಇದಕ್ಕೆ ವಿರುದ್ಧವಾಗಿ `ಕರ್ನಾಟಕ ಪತ್ರಿಕಾ ಬಳಗ’ ಹೆಸರಿನ ವಾಟ್ಸಪ್ ಗ್ರೂಪ್ ಸಾಮಾಜಿಕ ಕಳಕಳಿಯನ್ನ ಮೆರೆದಿದೆ. ಗ್ರೂಪ್ ಗೆ ಬಂದ ಒಂದು ಮೆಸೇಜ್ ಗೆ ಸ್ಪಂದಿಸಿದ ಸದಸ್ಯರು ಕಷ್ಟದಲ್ಲಿನ ಕುಟುಂಬವೊಂದಕ್ಕೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

2017 ಮಾರ್ಚ್ 20 ರಂದು ರಾಯಚೂರಿನ ಗೋಶಾಲಾ ರಸ್ತೆಯಲ್ಲಿ ಸೈಕಲ್ ಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟ ಮನೆ, ಮನೆಗೆ ಪತ್ರಿಕೆ ಹಾಕುವ ಬಡ ಹುಡುಗ ಉಪೇಂದ್ರನ ಕುಟುಂಬಕ್ಕೆ ವಾಟ್ಸಪ್ ಗ್ರೂಪ್ ನ ಸದಸ್ಯರೆಲ್ಲಾ ಸೇರಿ 41,001ರೂ. ಚೆಕ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

ಎಲ್ಲಾ ಗ್ರೂಪ್ ಗಳಂತೆ ಹುಟ್ಟಿಕೊಂಡ ಕರ್ನಾಟಕ ಪತ್ರಿಕಾ ಬಳಗ ಸಮಾಜಕ್ಕೆ ಒಳಿತು ಮಾಡುವ ಉದ್ದೇಶದೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ಕರ್ನಾಟಕದ ವಿವಿಧ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡುವ ಜಾಹಿರಾತು, ಪ್ರಸರಣ, ವರದಿಗಾರಿಕೆ ಸೇರಿ ವಿವಿಧ ವಿಭಾಗಗಳ ವಿವಿಧ ಜಿಲ್ಲೆಯ 214 ಜನ ಈ ಗ್ರೂಪ್ ನ ಸದಸ್ಯರಾಗಿದ್ದಾರೆ.

ಸಂಜೀವ್ ಕುಮಾರ್, ಮಹಾರುದ್ರಲಿಂಗ ಪಟ್ಟಣಶೆಟ್ಟಿ, ಮಂಜುನಾಥ್ ದ್ಯಾವನಗೌಡ್ರು, ಶಂಕರಲಿಂಗ ಮಾಳಗಿ ಅವರ ಆಸಕ್ತಿಯಿಂದ ಈ ಗ್ರೂಪ್ ಸಮಾಜ ಮುಖಿಯಾಗಿ ಮುಂದುವರೆಯಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಹುಬ್ಬಳಿ ವಿಭಾಗದಲ್ಲಿ ಈ ಗ್ರೂಪ್ ನ್ನ ನೋಂದಣಿ ಮಾಡಿಸುವ ಮೂಲಕ ಹೆಚ್ಚು ಜವಾಬ್ದಾರಿ ಹೊತ್ತುಕೊಳ್ಳಲು ಈ ಗೆಳೆಯರ ಗುಂಪು ಆಸಕ್ತಿ ಹೊಂದಿದೆ.

Leave a Reply