ಗೌರಿ ಲಂಕೇಶ್ ಹತ್ಯೆ ಪ್ರಕರಣ- ಹುಬ್ಬಳ್ಳಿಯ ಇಬ್ಬರ ಬಂಧನ

-ಪತಿಗೇನಾದ್ರೂ ಆದ್ರೆ ನಾವು ಉಳಿಯಲ್ಲ ಅಂತ ಅಮಿತ್ ಪತ್ನಿ ಕಣ್ಣೀರು

ಹುಬ್ಬಳ್ಳಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್‍ಐಟಿ ಹುಬ್ಬಳ್ಳಿಯ ಇಬ್ಬರನ್ನು ಬಂಧಿಸಿದೆ. ಚೇತನ್ ಕಾಲೋನಿ ನಿವಾಸಿ ಗಣೇಶ್ ಮಿಸ್ಕೀನ್ ಮತ್ತು ಜನತಾ ಬಜಾರ್ ನಿವಾಸಿ ಅಮಿತ್ ಬದ್ದಿಯ ವಿಚಾರಣೆ ನಡೆಯುತ್ತಿದೆ.

ಈ ಕುರಿತು ಅಮಿತ್ ಬದ್ದಿ ಕುಟುಂಬ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ಅವರು ನಿರಪರಾಧಿ. ದಯಮಾಡಿ ಅವರನ್ನು ಬಿಟ್ಟು ಬಿಡಿ. ಅಲ್ಲದೇ ಈ ಬಗ್ಗೆ ನಮಗೇನೂ ಗೊತ್ತಿಲ್ಲ. ಮಧ್ಯಾಹ್ನ ಬರುತ್ತಾರೆ ಅಂತ ಕಾದು ಕುಳಿತಿದ್ದೆವು. ಆದ್ರೆ ಅವರನ್ನು ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ಅವರಿಗೇನೂ ಆದ್ರೆ ನಾವು ಉಳಿಯಲ್ಲ ಅಂತ ಪತ್ನಿ ಕಣ್ಣೀರು ಹಾಕಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಹುಡುಗ ಅಂಥವನಲ್ಲ. ಅವನಿಂದ ನಮ್ಮ ಕುಟುಂಬ ಇಂದು ನಡೆಯುತ್ತಿದೆ. ಮನೆ ಬಾಡಿಗೆ ಕೊಡುತ್ತಿದ್ದಾನೆ. ಒಟ್ಟಿನಲ್ಲಿ ತಂದೆ ತೀರಿಕೊಂಡ ಬಳಿಕ ಮನೆಯ ವಹಿವಾಟುಗಳನ್ನೆಲ್ಲಾ ನೋಡಿಕೊಳ್ಳುವ ಒಳ್ಳೆಯ ಹುಡುಗನನ್ನು ಹೇಳದೆ ಕೇಳದೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಅಂತ ಅಮಿತ್ ತಾಯಿ ಹೇಳಿದ್ದಾರೆ.

ಬೇರೆಯವರಿಗೆ ಸಹಾಯ ಮಾಡ್ತೀನಿ ಅಂತ ಹೇಳಿ ಹೋದ ಹುಡುಗ ಮತ್ತೆ ವಾಪಸ್ ಮನೆಗೆ ಬಂದಿಲ್ಲ. ರಾತ್ರಿವರೆಗೂ ಕಾದು ಎಲ್ಲರಿಗೂ ಫೋನ್ ಮಾಡಿದ್ರೆ ಯಾರು ಮಗ ಎಲ್ಲಿ ಹೋಗಿದ್ದಾನೆಂದು ಹೇಳಿಲ್ಲ. ರಾತ್ರಿ ಒಬ್ಬರು ಬಂದು ನಿಮ್ಮ ಮಗನ ಹಿಂಗೆ ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿದ ತಕ್ಷಣ ನಾನು ಓಡಿಹೋದೆ ಅಂತ ತಾಯಿ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ  ಮೋಹನ್ ನಾಯಕ್ ಎಂಬ ವ್ಯಕ್ತಿಯನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ ಮತ್ತು ಅಮೂಲ್ ಕಾಳೆ ಇಬ್ಬರಿಗೂ ಮೋಹನ್, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯೊಂದನ್ನು ಕೊಡಿಸಿದ್ದನು ಎಂಬ ಮಾಹಿತಿಗಳು ಲಭ್ಯವಾಗಿತ್ತು.

Comments

Leave a Reply

Your email address will not be published. Required fields are marked *