ಇಂದು ಮೂವರು, ನಾಳೆ ಇಬ್ಬರು ಕೈ ಶಾಸಕರು ರಾಜೀನಾಮೆ?

ಬೆಂಗಳೂರು: ಸಣ್ಣದೊಂದು ವಿರಾಮದ ಬಳಿಕ ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮತ್ತೆ ಶುರುವಾಗುವ ಸಾಧ್ಯತೆ ಇದ್ದು ಇಂದು ಮತ್ತೆ ಮೂವರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಮಂಗಳವಾರ ಆಷಾಢ ಅಮಾವಾಸ್ಯೆ, ಜೊತೆಗೆ ಸೂರ್ಯಗ್ರಹಣ. ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಗೂ ಮುಹೂರ್ತ ನೋಡುವ ಶಾಸಕರು ಈಗ ರಾಜೀನಾಮೆಗೂ ಗ್ರಹಗತಿ ನೋಡುತ್ತಿದ್ದಾರೆ. ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು

ಮೂಲಗಳ ಪ್ರಕಾರ ಇವತ್ತು ಮೂವರು ಶಾಸಕರು, ನಾಳೆ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇವತ್ತು ರಾಜೀನಾಮೆ ಕೊಡಬಹುದು ಎಂದು ಊಹಿಸಲಾಗಿರುವ ಶಾಸಕರ ಪಟ್ಟಿಯಲ್ಲಿ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೆಸರಿದೆ.

ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಕೂಡಾ ರಾಜೀನಾಮೆ ನೀಡಬಹುದು ಎನ್ನಲಾಗ್ತಿದೆ. ಇಷ್ಟು ಮಂದಿಯೂ ರಾಜೀನಾಮೆ ಕೊಟ್ಟರೆ ಆಗ ಪತನ ಆಗಲಿರುವ ಕಾಂಗ್ರೆಸ್‍ನ ವಿಕೆಟ್‍ಗಳ ಸಂಖ್ಯೆ ಏಳಕ್ಕೆ ತಲುಪಲಿದೆ.

Comments

Leave a Reply

Your email address will not be published. Required fields are marked *