ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ: ಸಿಎಂ ಎಚ್‍ಡಿಕೆ ಭರವಸೆ

ಹಾಸನ: ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ, ಗುರು ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀರೂರಿನಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ ಉಗ್ರರ ದಾಳಿ ಆಗಬಾರದಿತ್ತು, ಇದು ಅತ್ಯಂತ ದುರಂತ ಮತ್ತು ಭಯಾನಕ ಕೃತ್ಯ. ಇಂದು ಪಾಕಿಸ್ತಾನದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು. ಒಟ್ಟಾಗಿ ಹೋರಾಡಬೇಕು. ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ವೀರ ಮರಣ ಹೊಂದಿರುವ ಯೋಧ ಗುರು ಅವರ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಈ ಕುರಿತು ನಮ್ಮ ಜಿಲ್ಲಾ ಮಂತ್ರಿಗಳ ಹತ್ತಿರ ಚರ್ಚೆ ನಡೆಸಿದ್ದೇನೆ. ಗುರು ಅವರ ಪತ್ನಿ ಅವರ ವಿದ್ಯಾಭ್ಯಾಸದ ಕುರಿತು ಮಾಹಿತಿ ಪಡೆಯಲು ಮಂತ್ರಿಗಳಿಗೆ ಸೂಚಿಸಿದ್ದೇನೆ. ಅವರ ವಿದ್ಯಾರ್ಹತೆ ಮೇಲೆ ಉದ್ಯೋಗವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಪದೇ ಪದೇ ಬಿಜೆಪಿಯವರು ಕ್ಲರ್ಕ್ ಎಂಬ ಮಾತು ಹೇಳ್ತಿದ್ದಾರೆ. ನಾನು ಕಾಂಗ್ರೆಸ್ಸಿನ ಕ್ಲರ್ಕ್ ಅಲ್ಲ, ರಾಜ್ಯದ ಜನರ ಕ್ಲರ್ಕ್. ಜನರ ಸಮಸ್ಯೆ ಬಗೆಹರಿಸಲು ಕ್ಲರ್ಕ್ ಆಗಿದ್ದೇನೆ ಎಂದು ಅಮಿತ್ ಶಾ ಅವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.

ಪ್ರೀತಂ ಗೌಡ ಮನೆಯ ಮೇಲೆ ನಡೆದ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ಶಾಮೀಲಾದವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಬಿಜೆಪಿಯವರಿಗೆ ನೈತಿಕತೆ ಇಲ್ಲ. ಯಡಿಯೂರಪ್ಪರ ಆಡಿಯೋ ಕೇಳಿದರೆ ಎಲ್ಲರಿಗೂ ಗೊತ್ತಾಗುತ್ತದೆ ಅದು ಯಾರದ್ದು ಅಂತ. ಸ್ಪೀಕರ್‍ಗೆ ಹಣ ಕೊಟ್ಟಿದ್ದೀವಿ ಅಂತಾರೆ ಕಪ್ಪುಹಣ ಬಿಜೆಪಿಗೆ ಎಲ್ಲಿಂದ ಬಂತು? ಯಡಿಯೂರಪ್ಪರ ಆಡಿಯೋ ವಿಚಾರದ ಬಗ್ಗೆ ಅಮಿತ್ ಶಾ ಚರ್ಚಿಸಬೇಕಾಗಿತ್ತು. ಬಿಜೆಪಿಗೆ ಜನರ ಸಮಸ್ಯೆ ಬಗ್ಗೆ ಕಮಿಟ್‍ಮೆಂಟ್ ಇಲ್ಲ ಟೀಕಿಸಿದ್ದಾರೆ.

ಬಿಜೆಪಿಯವರಿಗೆ ನನ್ನನ್ನು ಕೆಳಗಿಳಿಸಬೇಕು ಎಂಬ ಯೋಚನೆ ಇದೆ. ಆ ದೇವರು ನನಗೆ ಎಷ್ಟು ದಿನ ಅಧಿಕಾರದಲ್ಲಿ ಇರಬೇಕು ಅಂತಾ ಬರೆದಿದ್ದಾನೆ ನೋಡೋಣ. ಅಷ್ಟು ದಿನ ನಾನು ಸಿಎಂ ಆಗಿರುತ್ತೇನೆ. ಸರ್ಕಾರ ಸುಭದ್ರವಾಗಿದೆ ಅಸ್ಥಿರವಾಗಲ್ಲ. ನಾನು ಒಳ್ಳೆಯ ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *