ಜೆಎನ್‍ಯುನಲ್ಲಿ ಹಲ್ಲೆ – ಫೋನ್ ನಂಬರ್‌ನಿಂದ ಫಜೀತಿಗೆ ಸಿಲುಕಿದ ಕಾಂಗ್ರೆಸ್

– ಚರ್ಚೆ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕಾಂಗ್ರೆಸ್
– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

ನವದೆಹಲಿ : ಭಾನುವಾರ ರಾತ್ರಿ ದೆಹಲಿಯ ಜೆಎನ್‍ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲಾದ ಹಲ್ಲೆಗೆ ಕಾರಣ ಯಾರು, ಘಟನೆಯ ಹಿಂದಿರುವ ಶಕ್ತಿ ಯಾವುದು ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಎಬಿವಿಪಿ ಮೇಲೆ ಆರೋಪಿಸಿದರೆ ಇತ್ತ ಎಬಿವಿಪಿ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಪ್ರತ್ಯಾರೋಪ ಮಾಡುತ್ತಿವೆ.

ಪರ ವಿರೋಧ ಚರ್ಚೆಗಳ ನಡುವೆ ಪತ್ರಕರ್ತೆ ಬರ್ಕಾ ದತ್ ಮಾಡಿರುವ ಒಂದು ಟ್ವಿಟ್ ಹೊಸ ಚರ್ಚೆ ಹುಟ್ಟು ಹಾಕಿದೆ. ನಿನ್ನೆ ನಡೆದ ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆಯೇ ಎನ್ನುವ ಅನುಮಾನ ಹುಟ್ಟು ಹಾಕಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ರಾತ್ರಿ 10 ಗಂಟೆಗೆ ವಾಟ್ಸಪ್ ಚಾಟ್ ಸ್ಕ್ರೀನ್ ಚಾಟ್ ಅಪ್ಲೋಡ್ ಮಾಡಿ ಘಟನೆ ಪೂರ್ವ ನಿಯೋಜಿತ ಎನ್ನುವ ರೀತಿಯಲ್ಲಿ ಅವರು ಟ್ವೀಟ್ ಮಾಡಿದ್ದರು. ಯೂನಿಟಿ ಅಗ್ನೆಸ್ಟ್ ಲೆಫ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಜೆಎನ್‍ಯು ಕ್ಯಾಂಪಸ್ ನಲ್ಲಿ ಗಲಭೆ ಮಾಡುವ ಬಗ್ಗೆ ಮುಂಚೆಯೇ ಚರ್ಚೆ ಆಗಿದೆ. ಇದರಲ್ಲಿ ಕ್ಯಾಂಪಸ್ ಮುಖ್ಯ ಗೇಟ್ ಬಳಿ ಏನಾದರೂ ಮಾಡಬೇಕೇ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದರು.

ಈ ಪೈಕಿ ಚಾಟ್ ಲಿಸ್ಟ್ ನಲ್ಲಿದ್ದ ನಂಬರ್ ಅನ್ನು ಬ್ಲರ್ ಮಾಡದೇ ಹಾಗೆಯೇ ಹಾಕಿದ್ದರು. ಈ ನಂಬರ್ ಅನ್ನು ಕೂಡಲೇ ಜನ ಚೆಕ್ ಮಾಡಿದ್ದು ಇದು ಕಾಂಗ್ರೆಸ್ ಕ್ರೌಡ್ ಫೌಂಡಿಂಗ್ ವೆಬ್‍ಸೈಟಿಗೆ ಲಿಂಕ್ ಆಗಿದ್ದನ್ನು ಜನ ಪತ್ತೆ ಹಚ್ಚಿದ್ದಾರೆ.

https://twitter.com/Anshulkanwar3/status/1213868803114713088

ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಕಾಂಗ್ರೆಸ್ ಪ್ರತಿಕ್ರಿಯಿಸಿ, ನಮ್ಮ ಸಾಮಾಜಿಕ ಜಾಲತಾಣ ವಿಭಾಗ ಈ ಹಿಂದೆ ಕಾಂಗ್ರೆಸ್ಸಿಗೆ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಹಲವು ಖಾಸಗಿ ಸಂಸ್ಥೆಗಳ ಜೊತೆ ಕೈ ಜೋಡಿಸಿತ್ತು. ಲೋಕಸಭಾ ಚುನಾವಣೆಗೂ ಮುನ್ನ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು ಈಗ ನಿಲ್ಲಿಸಲಾಗಿದೆ. ಈ ನಂಬರ್ ಆ ಸಂಸ್ಥೆಯ ವ್ಯಕ್ತಿಗೆ ಸೇರಿದ್ದೇ ಹೊರತು ಕಾಂಗ್ರೆಸ್ಸಿಗೆ ಸೇರಿದ್ದಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

Comments

Leave a Reply

Your email address will not be published. Required fields are marked *