ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ – ಚಿತ್ರದುರ್ಗ ಕೋರ್ಟಿನಿಂದ ಮೇವಾನಿಗೆ ಜಾಮೀನು

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ 1ನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳಿಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಇಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೇವಾನಿ ಅವರಿಗೆ 25 ಸಾವಿರದ ಬಾಂಡ್ ಹಾಗೂ ವ್ಯಕ್ತಿಯೊಬ್ಬರು ನೀಡಿದ ಶ್ಯೂರಿಟಿ ಮೇರೆಗೆ ನ್ಯಾಯಾಧೀಶರಾದ ಶಂಕರಪ್ಪ.ಬಿ.ಮಾಲಾಶೆಟ್ಟಿ ಜಾಮೀನು ಮಂಜೂರು ಮಾಡಿದರು. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 2ಕ್ಕೆ ಮುಂದೂಡಿಕೆಯಾಗಿದೆ.

ಏನಿದು ಪ್ರಕರಣ?
ಕಳೆದ ವಿಧಾನಸಭೆ ಚುನಾವಣೆ ವೇಳೆ ಏಪ್ರಿಲ್ 6, 2018 ರಂದು ಚಿತ್ರದುರ್ಗದಲ್ಲಿ ನಡೆದ ಸಂವಾದದಲ್ಲಿ ಮತನಾಡುವಾಗ ಮೋದಿ ಸಮಾವೇಶಕ್ಕೆ ತೆರಳಿ, ಅವರ ಮೇಲೆ ಕುರ್ಚಿ ಎಸೆದು ಗಲಾಟೆ ಮಾಡಿ ಎಂದು ಮೇವಾನಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಹೀಗಾಗಿ ಕಾರ್ಯಕ್ರಮ ಸಂಘಟಕ ಟಿ.ಶಫಿವುಲ್ಲಾ ಹಾಗೂ ಜಿಗ್ನೆಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ನಗರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಸಂಬಂಧ ಚಿತ್ರದುರ್ಗ ನ್ಯಾಯಾಲಯಕ್ಕೆ ಜಿಗ್ನೇಶ್ ಮೇವಾನಿ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ನಾನು ಆ ರೀತಿ ಹೇಳಿಲ್ಲ, ಅಸಲಿಗೆ ನನಗೆ ಮೋದಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ವಿರುದ್ಧ ಕಿಡಿ:
ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಹೆಸರು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಆರೆಸ್ಸೆಸ್, ಬಿಜೆಪಿಯವರ ಹಿಡನ್ ಅಜೆಂಡಾ ಇದಾಗಿದ್ದು, ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವ ಮೂಲಕ ಮುಸ್ಲಿಂ ಸಮುದಾಯವನ್ನು ದಮನ ಮಾಡುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಿಂದೂ ಮುಸ್ಲಿಂ ಸಮುದಾಯಗಳನ್ನು ವಿಭಜಿಸಲಾಗುತ್ತಿದ್ದು, ಆರೆಸ್ಸೆಸ್ ಕೋಮುವಾದಿ ಮನಸ್ಥಿತಿಯಿಂದ ಕೆಲಸ ಮಾಡುತ್ತಿದೆ. ವೈವಿಧ್ಯತೆಯಲ್ಲೂ ಏಕತೆಯಿಂದಿರುವುದೇ ದೇಶದ ಸೌಂದರ್ಯವಾಗಿದೆ. ಏಕತೆಯನ್ನು ನಾವು ಪಾಲಿಸಬೇಕಿದೆ ಎಂದರು.

ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವಾಡುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಹೀಗಾಗಿ ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಇಂಥ ತಂತ್ರ ಹೂಡುತ್ತಿದ್ದಾರೆ. ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸೆಂಚೂರಿ. ಚಹಾ ಮರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ದೇಶ ಮಾರುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿಗೆ ದಲಿತರು, ಮುಸ್ಲಿನರು 2ನೇ ದರ್ಜೆ ನಾಗರೀಕರು. ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವುದು ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *