ನಿರಂತರ 24 ದಿನ, 600 ಕಿ.ಮೀ. ಸೈಕಲ್ ತುಳಿದ ಬಳಿಕ ಕೊನೆಗೂ ಪತ್ನಿಯನ್ನ ಹುಡುಕಿದ ಪತಿ!

ರಾಂಚಿ: ಪತಿ ಸಾಹಸ ಮಾಡಿ ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತರ ಪತ್ತೆ ಹಚ್ಚಿರುವ ಘಟನೆ ಜಾರ್ಖಂಡ್ ನ ಜಮ್ಶೆದ್‍ಪುರನಲ್ಲಿ ನಡೆದಿದೆ.

ಮನೋಹರ ನಾಯಕ್ ತನ್ನ ಪತ್ನಿಗಾಗಿ 24 ದಿನಗಳಲ್ಲಿ ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೂ ಪತ್ನಿಯನ್ನು ಹುಡುಕಿದ್ದಾರೆ. ಇವರು ಮುಸಬಾನಿ ಬಾಲಿಗೊಡಾ ಗ್ರಾಮದವರು. ಇವರ ಪತ್ನಿ ಅನಿತಾ ಜನವರಿ 14ರಂದು ಸಂಕ್ರಾಂತಿ ಹಬ್ಬಕ್ಕೆಂದು ಕುಮಾರ್ಸಾಲ್ ಹಳ್ಳಿಯ ತವರಿಗೆ ಹೋಗಿದ್ದಾಗ ಕಾಣೆಯಾಗಿದ್ದರು.

ಆದರೆ ಎರಡು ದಿನಗಳಾದರೂ ಪತ್ನಿ ಹಿಂದಿರುಗದಿದ್ದಾಗ ಮನೋಹರ್, ಮುಸಬಾನಿ ಮತ್ತು ದುಮಾರಿಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು. ಮನೋಹರ್ ಕಾರ್ಮಿಕರಾಗಿದ್ದು, ಪತ್ನಿ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಿದ್ದಾಗ ಕೊನೆಗೆ ತಾವೇ ಪತ್ನಿಯನ್ನ ಹುಡುಕುವ ದೃಢ ನಿರ್ಧಾರ ಮಾಡಿದರು. ಮನೋಹರ್ ಪತ್ನಿ ಅನಿತಾ ಅವರ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ ಹಾಗೂ ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲವಾದ ಕಾರಣ ತಾನಾಗಿಯೇ ಪತ್ನಿಯನ್ನ ಹುಡುಕಿ ಹೊರಟರು.

ನಾನು ನನ್ನ ಹಳೆಯ ತುಕ್ಕು ಹಿಡಿದ ಸೈಕಲ್ ರಿಪೇರಿ ಮಾಡಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಪ್ರಯಾಣಿಸಿದೆ. ಎಷ್ಟು ದೂರ ಬಂದಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಮನೋಹರ್ ಹೇಳಿದ್ದಾರೆ.

ಮನೋಹರ್ ದಿನಕ್ಕೆ 25 ಕಿ.ಮೀ. ದೂರ ಸೈಕಲ್ ತುಳಿದು 24 ದಿನಗಳಲ್ಲಿ ಸುಮಾರು 65 ಗ್ರಾಮಗಳನ್ನು ಸುತ್ತಾಡಿದ್ದಾರೆ. ಆದ್ರೆ ನಿಂತರವಾಗಿ ಪತ್ನಿಯನ್ನ ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪತ್ನಿಯ ಫೋಟೋವನ್ನು ಸ್ಥಳೀಯ ಪತ್ರಿಕೆಗಳಿಗೆ ನೀಡಿ ಕಾಣೆಯಾದ ವ್ಯಕ್ತಿಗಳ ಅಂಕಣದಲ್ಲಿ ಪ್ರಕಟಿಸಲು ಕೇಳಿದ್ದರು. ಫೋಟೋ ನೋಡಿದವರೊಬ್ಬರು ಮನೋಹರ್ ಪತ್ನಿ ಕೊಲ್ಕತ್ತಾದ ಖರಗ್‍ಪುರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಕುಳಿತಿರುವುದನ್ನ ನೋಡಿ ಗುರುತು ಹಿಡಿದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಂದ ಮುಸಬಾನಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಅವರು ಮನೋಹರ್ ಗೆ ಮಾಹಿತಿ ತಿಳಿಸಿದ್ದಾರೆ. ಮನೋಹರ್ ಅಲ್ಲಿಗೆ ಹೋಗಿ ತಮ್ಮ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ.

ನಾವು ಕೂಡಲೇ ಅಧಾರ್ ಕಾರ್ಡ್ ಸಮೇತ ಅಲ್ಲಿಗೆ ಹೋಗುವಂತೆ ಮನೋಹರ್ ಗೆ ಹೇಳಿದೆವು. ಫೆಬ್ರವರಿ 10ರಂದು ಮನೋಹರ್ ಹಾಗೂ ಪತ್ನಿ ಅನಿತಾ ಜೊತೆಯಾಗಿದ್ದಾರೆ ಎಂದು ಮುಸಬಾನಿ ಎಸ್‍ಹೆಚ್‍ಓ ಸುರೇಶ್ ಲಿಂಡಾ ಹೇಳಿದ್ದಾರೆ. ಫೆಬ್ರವರಿ 11ರಂದು ದಂಪತಿ ಮನೆಗೆ ವಾಪಸ್ ಬಂದಿದ್ದಾರೆ.

Comments

Leave a Reply

Your email address will not be published. Required fields are marked *