ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.

ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ.

ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್‌ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.