4ನೇ ಬಾರಿಗೆ ಜಾರ್ಖಂಡ್‌ ಸಿಎಂ ಆಗಿ ಇಂದು ಹೇಮಂತ್‌ ಸೊರೆನ್‌ ಪ್ರಮಾಣ ವಚನ ಸ್ವೀಕಾರ

ರಾಂಚಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು (INDIA alliance) ನಿರ್ಣಾಯಕ ಗೆಲುವಿನತ್ತ ಮುನ್ನಡೆಸಿದ ಹೇಮಂತ್‌ ಸೊರೆನ್‌ (Hemant Soren) ಇಂದು (ನ.28) 4ನೇ ಬಾರಿಗೆ ಜಾರ್ಖಂಡ್‌ನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಂಚಿಯ ಮೊರ್ಹಬಾದಿ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಜಾರ್ಖಂಡ್‌ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌, 49 ವರ್ಷದ ಹೇಮಂತ್‌ ಸೊರೆನ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಮೈತ್ರಿಕೂಟದ ನಡುವೆ ಸಚಿವ ಸಂಪುಟ ಪಟ್ಟಿ ಅಂತಿಮವಾಗದೇ ಇರುವುದರಿಂದ ಇಂದು ಹೇಮಂತ್‌ ಸೊರೆನ್‌ ಏಕೈಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜೆಎಂಎಂ (JMM) ಮುಖ್ಯಮಂತ್ರಿ ಹುದ್ದೆಯೊಂದಿಗೆ 6 ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್‌ (Congress) ನಾಲ್ಕು ಸ್ಥಾನಗಳು ಮತ್ತು ತೇಜಸ್ವಿ ಯಾದವ್‌ ಅವರ ರಾಷ್ಟ್ರೀಯ ದಳಕ್ಕೆ ಒಂದು ಸ್ಥಾನ ಸಿಗಲಿದೆ. ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ-ಎಂಎಲ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ ವಿರುದ್ಧ ದೇಶದ್ರೋಹದ ಕೇಸ್‌ – ಬಾಂಗ್ಲಾದಲ್ಲಿ ಇಸ್ಕಾನ್ ಬ್ಯಾನ್‌ ಆಗುತ್ತಾ?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ನವೆಂಬರ್‌ ತಿಂಗಳು 2 ಹಂತಗಳಲ್ಲಿ ನಡೆದ ಜಾರ್ಖಂಡ್‌ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸತತ 2ನೇ ಬಾರಿಗೆ ಅಧಿಕಾರ ಹಿಡಿಯಿತು. 81 ಸ್ಥಾನಗಳಲ್ಲಿ ಜೆಎಂಎಂ 34 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16, ಆರ್‌ಜೆಡಿ 4 ಮತ್ತು ಸಿಪಿಐ (ಎಂಎಲ್) ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

ಹೇಮಂತ್‌ ಸೊರೆನ್‌ ಹಾದಿ ಹೇಗಿತ್ತು?
ಹೇಮಂತ್‌ ಸೊರೆನ್‌ಗೆ 2024ರ ಆರಂಭ ಮತ್ತು ಅಂತ್ಯವು ಹೆಚ್ಚು ಭಿನ್ನವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಬಂದ ನಾಯಕನ ಕೈ ಹಿಡಿದು ಜನ ಅಭಯ ತುಂಬಿದ್ದಾರೆ. ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದ ಸೊರೆನ್‌ ಒಂದೇ ವರ್ಷದಲ್ಲಿ 2ನೇ ಬಾರಿಗೆ ಸಿಎಂ ಆಗಿ ಪುನರಾಗಮನಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ನಾನ್‌ವೆಜ್ ಸೇವನೆ ಬಿಡುವಂತೆ ಒತ್ತಡ; ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ – ಪ್ರಿಯಕರ ಅರೆಸ್ಟ್

ಈಚೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಸೊರೆನ್‌ರನ್ನು ಭೂಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತು. ಬಂಧನಕ್ಕೊಳಗಾಗುವ ಮೊದಲು ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವರ್ಷ (2024) ಮುಗಿಯಲು ಒಂದು ತಿಂಗಳು ಉಳಿದಿರುವಾಗ, ಸೊರೆನ್ ಅವರು ಅಮೋಘ ವಿಜಯದ ವಾಸ್ತುಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ‘ಇಂಡಿಯಾ’ ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಸೊರೆನ್‌ ಮತ್ತೆ ಸಿಎಂ ಆಗಿ ಮುಂದುವರಿಯಲಿದ್ದಾರೆ.