ಜೆಟ್ ಏರ್‍ವೇಸ್ ಸಿಬ್ಬಂದಿಯ ಕಣ್ಣೀರು – ಮಕ್ಕಳೊಂದಿಗೆ ಸಮಯ ವ್ಯಯಿಸಿ ಸಲಹೆ ನೀಡಿದ ಅಧಿಕಾರಿಗಳು

ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ತನ್ನ ಹಾರಾಟವನ್ನು ನಿಲ್ಲಿಸಿದೆ. ಈ ಸಂಬಂಧ ಸುಮಾರು 20 ಸಾವಿರ ಸಿಬ್ಬಂದಿ ಬೀದಿಗೆ ಬಂದಿದ್ದು, ಪೈಲಟ್ ಸೇರಿದಂತೆ ಗಗನಸಖಿಯರು ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದಾರೆ.

ಗುರುವಾರ ಜೆಟ್ ಏರ್‍ವೇಸ್ ಸಿಬ್ಬಂದಿ ದೆಹಲಿಯಲ್ಲಿ ಒಂದೆಡೆ ಸೇರಿ ಶಾಂತಿಯುತವಾಗಿ ಪ್ರಧಾನಿಗಳು ನಮ್ಮ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಸಲ್ಲಿಸಿದರು. ಇಂದಿನ ನಮ್ಮ ಪರಿಸ್ಥಿತಿಗೆ ಸರ್ಕಾರ ಮತ್ತು ಬ್ಯಾಂಕ್‍ಗಳೇ ಹೊಣೆಯಂದು ಪ್ರತಿಭಟನಾ ನಿರತ ಸಿಬ್ಬಂದಿ ಆರೋಪಿಸಿದರು.

ಗುರುವಾರ ವಿಮಾನಗಳು ಯಾವುದೇ ಹಾರಾಟ ನಡೆಸದ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗುತ್ತಿದೆ. ಎರಡು ತಿಂಗಳಿನಿಂದ ಸಂಬಳ ಸಹ ನೀಡಿಲ್ಲ. ಕೆಲವರು ಮಕ್ಕಳ ಶಾಲೆಯ ಹಣ, ಸಾಲದ ಕಂತುಗಳನ್ನು ತುಂಬಲು ವಾಹನಗಳನ್ನು ಮಾರುತ್ತಿದ್ದಾರೆ. ಮತ್ತೆ ಕೆಲವರು ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಳ್ಳಲು ಚಿನ್ನಾಭರಣಗಳನ್ನು ಒತ್ತೆಇಟ್ಟು ಹಣ ಪಡೆಯುತ್ತಿದ್ದಾರೆ. ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ, ನಿಮ್ಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡುತ್ತಾರೆಂದು ಹೆಸರು ಹೇಳಲು ಇಚ್ಛಿಸದ ಉದ್ಯೋಗಿ ಹೇಳುತ್ತಾರೆ. ಇದನ್ನೂ ಓದಿ: ನನ್ನ ಹಣದಿಂದ ಜೆಟ್ ಏರ್‍ವೇಸ್ ಉಳಿಸಿ: ಮಲ್ಯ ಸಾಲು ಸಾಲು ಟ್ವೀಟ್

20 ಸಾವಿರ ಉದ್ಯೋಗಿಗಳ ಭವಿಷ್ಯ ಸಾಲ ನೀಡುವವರ ಮೇಲೆ ನಿಂತಿದೆ. ಸಿಬ್ಬಂದಿಗೆ ಒಂದು ದಿನದ ಸಂಬಳ ನೀಡಲು ನಮ್ಮಲ್ಲಿ ಹಣವಿಲ್ಲ. ಅಂತರರಾಷ್ಟ್ರೀಯ ವಿಮಾನಯಾನ ಸಂಘಟನೆ ಸಹ ನಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದೆ. ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಮರುಪಾವತಿಸಲು ಹಣವಿಲ್ಲ ಎಂದು ಜೆಟ್ ಏರ್‍ವೇಸ್ ಬೋರ್ಡ್ ಮೆಂಬರ್ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ:  ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

ಜೆಟ್ ಏರ್‍ವೇಸ್ ವಿಮಾನಯಾನ ಸೇವೆ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೆಟ್ ಏರ್‍ವೇಸ್ ಲಂಡನಿಗೆ ತೆರಳಲು 18 ಸಾವಿರ ರೂ. ನೀಡುತ್ತಿದ್ದ ಪ್ರಯಾಣಿಕರು ಇದೀಗ 42 ಸಾವಿರ ರೂ. ನೀಡುವಂತಾಗಿದೆ.

ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಜೆಟ್ ಏರ್‍ವೇಸ್ ಬುಧವಾರ ರಾತ್ರಿ ತನ್ನ ಕೊನೆಯ ಸೇವೆಯನ್ನು ನೀಡಿತ್ತು. ಜೆಟ್ ಏರ್‍ವೇಸ್ ಕಂಪನಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ಸಾಲವನ್ನು ನೀಡುವಂತೆ ಮನವಿ ಮಾಡಿಕೊಂಡಿತ್ತು.

Comments

Leave a Reply

Your email address will not be published. Required fields are marked *