ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್ ಹತ್ಯೆ

– ಅನಂತ್‍ನಾಗ್ ಜಿಲ್ಲೆಯ ಮುಂದುವರಿದ ಗುಂಡಿನ ದಾಳಿ

ಶ್ರೀನಗರ: ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರ ಸಜ್ಜದ್ ಭಟ್‍ನನ್ನು ಭಾರತೀಯ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ.

ದಕ್ಷಿಣ ಕಾಶ್ಮೀರನ ಅನಂತ್‍ನಾಗ್ ಜಿಲ್ಲೆಯ ಬಿಜ್ಜೆಹರಾ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರತೀಯ ಭದ್ರತಾ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರ ಸಜ್ಜದ್ ಮಕ್ಬೂಲ್ ಭಟ್ ಅಲಿಯಾಸ್ ಅಫ್ಜಲ್ ಗುರು ಅಲಿಯಾಸ್ ಹಫಿಝ್ ಹಾಗೂ ಇನ್ನೋರ್ವ ಪ್ರಮುಖ ಉಗ್ರ ತೌಸಿಫ್‍ನನ್ನು ಹತ್ಯೆ ಮಾಡಲಾಗಿದೆ.

ಹತ್ಯೆಯಾದ ಇಬ್ಬರು ಜಮ್ಮು-ಕಾಶ್ಮೀರ ಪುಲ್ವಾಮಾದಲ್ಲಿ ಇದೇ ವರ್ಷ ಫೆಬ್ರವರಿ 14 ರಂದು ಸಿಆರ್‍ಪಿಎಫ್ ಯೋಧರಿದ್ದ ವಾಹನ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಸಜ್ಜದ್ ಮಕ್ಬೂಲ್ ಭಟ್ ಅನಂತ್‍ನಾಗ್ ಜಿಲ್ಲೆಯ ಬಿಜ್ಜೆಹರಾ ಪ್ರದೇಶದ ಮರ್ಹಾಮಾ ಗ್ರಾಮದ ನಿವಾಸಿ. ಪುಲ್ವಾಮಾ ದಾಳಿಗೂ ಮುನ್ನವೇ ಸಜ್ಜದ್ ಮಕ್ಬೂಲ್ ಭಯೋತ್ಪಾದಕ ಸಂಘಟನೆ ಸೇರಿದ್ದ. ಉಗ್ರ ತಸ್ವೀಫ್ ಭಟ್ ಪುಲ್ವಾಮಾ ದಾಳಿಯ ವೇಳೆ ಆತ್ಮಾಹುತಿ ದಾಳಿಕೋರರನ್ನು ನಿರ್ವಹಿಸುತ್ತಿದ್ದ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವು ಉಗ್ರರು ಬಿಜ್ಜೆಹರಾ ಪ್ರದೇಶದಲ್ಲಿ ಇದ್ದಾರೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಹೀಗಾಗಿ ಭದ್ರತಾ ಸಿಬ್ಬಂದಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಗುಂಡಿನ ದಾಳಿ ನಡೆಸಲಾಗುತ್ತಿದೆ.

ಅನಂತ್‍ನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಆರ್ಮಿ ಮೇಜರ್ ಕೇತನ್ ಶರ್ಮಾ ಹುತಾತ್ಮರಾಗಿದ್ದು, ಮೂವರು ಸೈನಿಕರು ಗಾಯಗೊಂಡಿದ್ದರು. ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ ಮೇಜರ್ ಕೇತನ್ ಶರ್ಮಾ ಅವರಿಗೆ ಗೌರವ ಸಲ್ಲಿಸಿದ್ದರು.

ಅಮರನಾಥ್ ಯಾತ್ರಾರ್ಥಿಗಳಲ್ಲಿ ನಡುಕ:
ಅಮರನಾಥ್ ಯಾತ್ರೆಯು ಮುಂದಿನ ತಿಂಗಳು ಆರಂಭವಾಗಲಿದ್ದು, ಸುಮಾರು 45 ದಿನಗಳ ಕಾಲ ನಡೆಯಲಿದೆ. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರವು ಸಕಲ ಸಿದ್ಧತೆ ನಡೆಸಿದೆ. ಈ ತೀರ್ಥ ಯಾತ್ರೆಗೆ ಎರಡು ಮಾರ್ಗಗಳಿದ್ದು, ಒಂದು ಅನಂತ್‍ನಾಗ್ ಮೂಲಕ ಹಾದು ಹೋಗುತ್ತದೆ. ಹೀಗಾಗಿ ಅನಂತ್‍ನಾಗ್ ಮಾರ್ಗದ ಮೂಲಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಲ್ಲಿ ಈ ಬಾರಿ ಸಹಜವಾಗಿಯೇ ಆತಂಕ ಮೂಡಿದೆ. ಅಷ್ಟೇ ಅಲ್ಲದೆ ಕಳೆದ ವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ ಸಿಆರ್‌ಪಿಎಫ್ ನ 6 ಜನ ಪೊಲೀಸರು ಹುತಾತ್ಮರಾಗಿದ್ದರು.

Comments

Leave a Reply

Your email address will not be published. Required fields are marked *