INDIA ಒಕ್ಕೂಟದಲ್ಲಿ ಭಿನ್ನಮತ – ಖರ್ಗೆ, ಫರ್ಗೆ ಅಂದರೆ ಯಾರು ಎಂದ ಜೆಡಿಯು ಶಾಸಕ

ನವದೆಹಲಿ: INDIA ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೆಸರನ್ನು ಪ್ರಸ್ತಾಪ ಮಾಡಿದ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು ಜೆಡಿಯು (JDU) ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಮಾಧ್ಯಮದ ಜೊತೆ ಮಾತನಾಡಿದ ಜೆಡಿಯು ಶಾಸಕ ಗೋಪಾಲ್‌ ಮಂಡಲ್‌ (Gopal Mandal) ಅವರು, ಖರ್ಗೆ, ಫರ್ಗೆ ಅಂದರೆ ಯಾರು? ಆ ವ್ಯಕ್ತಿ ಯಾರಿಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ ಎಷ್ಟು ಜನರಿಗೆ ಮಲ್ಲಿಕಾರ್ಜುನ ಖರ್ಗೆ ಹೆಸರು ಗೊತ್ತಿದೆ? ಆದರೆ ನಿತೀಶ್‌ ಕುಮಾರ್‌ (Nitish Kumar) ಹೆಸರು ದೇಶದ ಎಲ್ಲರಿಗೂ ಗೊತ್ತಿದೆ. ನಿತೀಶ್‌ ಕುಮಾರ್‌ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: INDIA ಸಭೆ ಟೀ, ಬಿಸ್ಕೆಟ್‌ಗೆ ಮಾತ್ರ ಸೀಮಿತ – ಸಮೋಸಾಗೆ ಕಾಂಗ್ರೆಸ್‌ ಬಳಿ ಹಣವಿಲ್ಲ: ಜೆಡಿಯು ಸಂಸದ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸೋತಿದ್ದರೂ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಹೆಚ್ಚಿನ ಸ್ಥಾನ ಕೇಳುತ್ತಿರುವುದು ಬಿಹಾರ ಸಿಎಂ ನಿತೀಶ್‌ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ನಡೆದ INDIA ಸಭೆಯಲ್ಲಿ ತನ್ನ ಮಾತನ್ನು ಅನುವಾದಿಸಿ ಹೇಳಬೇಕೆಂಬ ಡಿಎಂಕೆ ನಾಯಕರು ಹೇಳಿದ್ದಕ್ಕೆ ನಿತೀಶ್‌ ಕುಮಾರ್‌ ಅಲ್ಲೇ ತಾಳ್ಮೆ ಕಳೆದುಕೊಂಡು ಸಿಟ್ಟು ಹೊರ ಹಾಕಿದ್ದರು.

ಡಿಎಂಕೆ ಪ್ರತಿನಿಧಿಗಳು ಈ ಬೇಡಿಕೆ ಇರಿಸಿದ ಬಳಿಕ ಆರ್‌ಜೆಡಿಯ ಮನೋಜ್ ಕೆ. ಝಾ ಅವರು ಅನುವಾದಿಸಲು ಆರಂಭಿಸಿದರು. ಈ ವೇಳೆ ರಾಷ್ಟ್ರಭಾಷೆಯಾಗಿರುವ ಹಿಂದಿಯನ್ನು ಡಿಎಂಕೆ ನಾಯಕರು ಕಲಿಯಬೇಕು, ಅನುವಾದ ಮಾಡುವ ಕೆಲಸ ಬೇಡ ಎಂದು ಖಾರವಾಗಿ ಹೇಳಿದ್ದರು ಎಂದು ವರದಿಯಾಗಿತ್ತು.