ಮಂಡ್ಯದಲ್ಲಿ ದಳಪತಿಗಳಿಗೆ ಮುಖಭಂಗ – ಮತ್ತೆ ‘ಕೈ’ ವಶವಾಯ್ತು ಮನ್ಮುಲ್‌ ಗದ್ದುಗೆ

– ಜೆಡಿಎಸ್‌ ಶಾಸಕರ ವಿರುದ್ಧವೇ ಗೆದ್ದು ಬೀಗಿದ ಬಂಡಾಯ ಅಭ್ಯರ್ಥಿ

ಮಂಡ್ಯ: ಮಂಡ್ಯದಲ್ಲಿ (Mandya) ದಳಪತಿಗಳಿಗೆ ಮತ್ತೆ ಮುಖಭಂಗವಾಗಿದೆ. ಮನ್ಮುಲ್‌ (Manmul) ಗದ್ದುಗೆ ಮತ್ತೆ ‘ಕೈ’ ವಶವಾಗಿದೆ.

ಚುನಾವಣೆ ಅಷ್ಟೇ ಅಲ್ಲ, ಕಾನೂನಾತ್ಮಕವಾಗಿಯೂ ದಳಪತಿಗಳಿಗೆ ಹಿನ್ನಡೆಯಾಗಿದೆ. ಜೆಡಿಎಸ್‌ ಅಭ್ಯರ್ಥಿಗಳಿಗೆ ಕೋರ್ಟ್‌ ತೀರ್ಪು ಶಾಕ್ ಕೊಟ್ಟಿದೆ. ತಿಂಗಳ ನಂತರ ಅಧಿಕೃತ ಫಲಿತಾಂಶ ಘೋಷಣೆಯಾಗಿದ್ದು, ಜೆಡಿಎಸ್‌ ಶಾಸಕನನ್ನೇ ಮಣಿಸಿ ಬಂಡಾಯ ಅಭ್ಯರ್ಥಿ ಗದ್ದುಗೆ ಏರಿದ್ದಾರೆ.

ಕೆಆರ್‌ ಪೇಟೆಯ ಜೆಡಿಎಸ್‌ ಶಾಸಕ ಹೆಚ್‌.ಟಿ.ಮಂಜು ಅವರು ಶಾಸಕನಾಗಿಯೂ ಮನ್ಮುಲ್‌ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಜೆಡಿಎಸ್‌ ಶಾಸಕನಿಗೆ ಬಂಡಾಯ ಅಭ್ಯರ್ಥಿ ಮಣ್ಣುಮುಕ್ಕಿಸಿದ್ದಾರೆ. ಅಧಿಕೃತವಾಗಿ ಮನ್ಮುಲ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಡಾಲು ರವಿ, ಎಂ.ಬಿ.ಹರೀಶ್‌ಗೆ ವಿಜಯಮಾಲೆ ಒಲಿದಿದೆ. ಜೆಡಿಎಸ್‌ನಲ್ಲೇ ಇದ್ದು ಶಾಸಕ, ಬೆಂಬಲಿಗನ ವಿರುದ್ಧ ಬಂಡಾಯಗಾರರು ತೊಡೆತಟ್ಟಿದ್ದರು. ಅಧಿಕಾರ, ಜನ ಬಲದ ನಡುವೆಯೂ ರವಿ ಗೆದ್ದು ಬೀಗಿದ್ದಾರೆ. ಮನ್ಮುಲ್‌ ನೂತನ ನಿರ್ದೇಶಕರಾಗಿ ಗೆದ್ದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಮ್ಮ ಹೋರಾಟ ಶಾಸಕನ ವಿರುದ್ಧ ಅಷ್ಟೆ. ನಾವು ಈಗಲೂ ಜೆಡಿಎಸ್‌ನಲ್ಲಿದ್ದೇವೆ. ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸಹಾಯ ಮಾಡಿದ್ದಾರೆ ಅಷ್ಟೆ. ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ನಮಗೆ ಆಲೋಚನೆಯೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ಧವೇ ಮನ್ಮುಲ್‌ ನೂತನ ನಿರ್ದೇಶಕ ಗುಡುಗಿದ್ದಾರೆ.