ನಮ್ಮ ಬಂಡಾಯ ಬಹುತೇಕ ಶಮನವಾಗಿದೆ – ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ನಮ್ಮ ಬಂಡಾಯ ಬಹುತೇಕ ಶಮನವಾಗಿದೆ. ನಾವೆಲ್ಲ ದೇವೇಗೌಡರನ್ನು ಭೇಟಿ ಮಾಡಿದ್ದೇವೆ, ನಮ್ಮ ಅಸಮಾಧಾನದ ಕುರಿತು ತಿಳಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಂಡಾಯ ಬಹುತೇಕ ಶಮನವಾಗಿದೆ. ನಾವೆಲ್ಲ ದೇವೇಗೌಡರನ್ನು ಭೇಟಿ ಮಾಡಿದ್ದೇವೆ. ನಾವು ನಡೆಸಿದ ಸಭೆಯ ಬಗ್ಗೆ ತಿಳಿಸಿದ್ದೇವೆ. ದೇವೇಗೌಡರು ಸಹ ನವೆಂಬರ್ 6-7ಕ್ಕೆ ಮತ್ತೊಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ಈಗ ನಮ್ಮದು ಸರ್ಕಾರನೂ ಏನೂ ಇಲ್ಲ. ಮಂತ್ರಿ ಮಾಡಿ ಬೋರ್ಡ್ ಅಧ್ಯಕ್ಷರನ್ನು ಮಾಡಿ ಎಂದು ಕೇಳಲು ಸಾಧ್ಯವಿಲ್ಲ ಎಂದರು.

ನಮ್ಮ ಬಗ್ಗೆ ಕಾಳಜಿ ಮಾಡಿದ್ದಾರೆ. ನಮ್ಮ ಬಂಡಾಯ ಸ್ವಲ್ಪ ಶಮನವಾಗಿದೆ. ನಮ್ಮ ಬೇಡಿಕೆಗಳು ಏನೂ ದೊಡ್ಡದಾಗಿಲ್ಲ. ರೇವಣ್ಣ-ಕುಮಾರಸ್ವಾಮಿ ಒಮ್ಮೊಮ್ಮೆ ಒಬ್ಬಬ್ಬರನ್ನು ಒಮ್ಮೆಲೆ ಮೇಲೆ ಎಬ್ಬಿಸಿ ಬಿಡುತ್ತಾರೆ. ಜೆಡಿಎಸ್‍ನಿಂದ ಏರ್ಪಡಿಸಿರುವ ವಿದೇಶ ಪ್ರವಾಸಕ್ಕೆ ನಾವು 11 ಜನ ಸಹ ಬರುವುದಿಲ್ಲ ಎಂದು ತಿಳಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಇರುವಾಗ ವಿದೇಶ ಪ್ರವಾಸ ಒಳ್ಳೆಯದಲ್ಲ ಎಂದು ತಿಳಿಸಿದ್ದೇವೆ ಎಂದು ಹೇಳಿದರು.

ಸಚಿವ ಜಗದೀಶ್ ಶೆಟ್ಟರ್ ಆಗಲಿ ಬೇರೆ ಯಾರೇ ಆಗಲಿ ವಿದೇಶ ಪ್ರವಾಸಕ್ಕೆ ಹೋಗುವುದು ಸೂಕ್ತವಲ್ಲ. ಅಲ್ಲದೆ ಈ ಹಿಂದೆ ನಾನು ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿವಾದಕ್ಕೆ ಸಿಲುಕಬೇಡಿ ಎಂದು ಹೇಳಿದ್ದೆ. ಆದರೂ ಅವರು ಮಾಡಿದರು. ಕನ್ನಡದ ಧ್ವಜದ ಬಗ್ಗೆ ವಿನಾಕಾರಣ ಚರ್ಚೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *