ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ – ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್‌ ನಾಯಕರ ಒತ್ತಾಯ

ಮಂಡ್ಯ: ಕಳೆದ ಮಂಡ್ಯ ಲೋಕಸಭಾ ಚುನಾವಣೆ (Lok Sabha Election) ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇದೀಗ ಈ ಪ್ರಶ್ನೆಗೆ ಪೂರಕ ಉತ್ತರವನ್ನು ಮಂಡ್ಯ ಜೆಡಿಎಸ್ ನಾಯಕರು ನೀಡಿದ್ದಾರೆ‌.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಮಂಡ್ಯ ಜೆಡಿಎಸ್ (JDS) ನಾಯಕರು ಒಕ್ಕೊರಲಿನಿಂದ ಆಹ್ವಾನ ನೀಡಿದ್ದಾರೆ. ಜೆಡಿಎಸ್ ನಾಯಕರಾದ ಪುಟ್ಟರಾಜು, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ ಈ ಬಗ್ಗೆ ಅಭಿಪ್ರಾಯವನ್ನು ಹೇಳಿದ್ದಾರೆ. ಇದನ್ನೂ ಓದಿ: ನೀವು ತಲೆ ತಗ್ಗಿಸುವ ರೀತಿಯ ಕೆಲಸ ಮಾಡಲಿಲ್ಲ: ಕಟೀಲ್ ಭಾವುಕ

ಸದ್ಯ ನಾವು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆ ಮೈತ್ರಿಯೊಂದಿಗೆ ಎದುರಿಸುತ್ತಿದ್ದೇವೆ. ಸೀಟು ಹಂಚಿಕೆ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಸಭೆ ಸಹ ಇದೆ. ಡಿಸೆಂಬರ್ ಅಂತ್ಯಕ್ಕೆ ಇವೆಲ್ಲವೂ ಅಧಿಕೃತವಾಗುತ್ತದೆ.

ಬಹುತೇಕ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಉಳಿದುಕೊಳ್ಳುವ ವಿಶ್ವಾಸ ನಮಗೆ ಇದೆ. ಮಂಡ್ಯ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಬರಬೇಕು ಎಂಬ ಅಭಿಲಾಷೆ ನಮಗೆ ಇದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ನಮ್ಮ ನಾಯಕರ ಬಳಿ ನಿಖಿಲ್ ಬರಬೇಕು, ಇಲ್ಲವಾದಲ್ಲಿ ಕುಮಾರಸ್ವಾಮಿ ಅಥವಾ ದೇವೇಗೌಡರು ಮಂಡ್ಯದಿಂದ ಸ್ಪರ್ಧೆ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿ ಪರ ಇದ್ದು, ನಿಖಿಲ್ ಸ್ಪರ್ಧೆಯ ಬಗ್ಗೆ ನಮಗೆ ವಿಶ್ವಾಸ ಇದೆ ಎಂದು ಜೆಡಿಎಸ್‌ನ ಮಂಡ್ಯ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ