ಸಚಿವ, ಶಾಸಕರಿಗೆ ಜೆಡಿಎಸ್ ವರಿಷ್ಠರಿಂದ ಖಡಕ್ ವಾರ್ನಿಂಗ್ ಬಂದಿದೆ: ಸಾ.ರಾ ಮಹೇಶ್

ಮೈಸೂರು: ಮೈಸೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಸಚಿವ ಸಾ.ರಾ. ಮಹೇಶ್ ನಿವಾಸಕ್ಕೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಭೇಟಿ ನೀಡಿ ಮಾತುಕತೆ ನಡೆಸಿದರು. ಜೆಡಿಎಸ್ – ಕಾಂಗ್ರೆಸ್ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಸಮನ್ವಯತೆ ಮೂಡಿಸುವ ಬಗ್ಗೆ ಮಾತುಕತೆ ನಡೆಸಲಾಯಿತು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಜೆಡಿಎಸ್ ವರಿಷ್ಠರಿಂದ ಜೆಡಿಎಸ್ ಸಚಿವರಿಗೆ ಹಾಗೂ ಶಾಸಕರಿಗೆ ಖಡಕ್ ವಾರ್ನಿಂಗ್ ಬಂದಿದೆ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಮತ ಪ್ರಮಾಣ ಕಡಿಮೆಯಾದರೆ, ಅದಕ್ಕೆ ನೀವೇ ಹೊಣೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ, ಚುನಾವಣೆ ನಂತರ ಅದಕ್ಕೆ ನೀವು ಉತ್ತರ ಕೊಡಬೇಕಾಗುತ್ತದೆ. ವಿಧಾನಸಭಾ ಚುನಾವಣೆ ಮತಪ್ರಮಾಣದ ಆಧಾರದ ಮೇಲೆ ಈ ಚುನಾವಣೆ ಮತಗಳಿಕೆ ನೋಡುತ್ತೇವೆ ಎಂದು ಹೇಳಿದ್ದಾರೆ.

ಜೆಡಿಎಸ್ ವರಿಷ್ಠರು ಸೂಚನೆ ನೀಡಿರುವಂತೆ, ಕಾಂಗ್ರೆಸ್ ಕೂಡ ತಮ್ಮ ಶಾಸಕರು ಹಾಗೂ ಸಚಿವರಿಗೆ ವಾರ್ನಿಂಗ್ ನೀಡಬೇಕು ಎಂದರು. ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರಿಗೆ ಮೊದಲು ವಾರ್ನಿಂಗ್ ಮಾಡುತ್ತೇವೆ. ನಂತರ ಶಿಸ್ತು ಕ್ರಮ ನಿಶ್ಚಿತ. ಕಾಂಗ್ರೆಸ್ ಕೂಡ ಇದೇ ನಿಲುವು ಪಾಲಿಸುತ್ತಿದೆ. ನಾವು ಇದನ್ನೇ ಪಾಲಿಸುತ್ತೇವೆ. ಈ ನಿಲುವು ಪಾಲಿಸಿ ಇದರೆ ಮಾತ್ರ ಚುನಾವಣೆಯಲ್ಲಿ ಫಲಿತಾಂಶ ಪಡೆಯಲು ಸಾಧ್ಯ ಎಂದು ತಿಳಿಸಿದರು.

ನಟರ ವೈಯಕ್ತಿಕ ಟೀಕೆ ಬೇಡ:
ಇದೇ ವೇಳೆ ಸಚಿವರು, ನಟ ದರ್ಶನ್ ವಿಚಾರದಲ್ಲಿ ಜೆಡಿಎಸ್ ಮುಖಂಡರು ಮಾಡಿರುವ ವೈಯಕ್ತಿಕ ಟೀಕೆಗೆ ಪ್ರತಿಕ್ರಿಯಿಸಿ, ಯಾವುದೇ ಪಕ್ಷದ ಬೆಂಬಲಿತರ ಬಗ್ಗೆ ಯಾರೂ ವೈಯಕ್ತಿಕವಾಗಿ ಮಾತನಾಡಬಾರದು. ದರ್ಶನ್ ವಿಚಾರದಲ್ಲಿ ನಮ್ಮ ಪಕ್ಷದ ಮುಖಂಡರು ವೈಯುಕ್ತಿಕವಾಗಿ ಮಾತನಾಡಿರೋದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಇನ್ನು ಮುಂದೆ ಯಾರೂ, ನಟರನ್ನು ವೈಯುಕ್ತಿಕವಾಗಿ ಟೀಕಿಸಬೇಡಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *