ಜೆಡಿಎಸ್ ಮುಖಂಡನಿಂದ ಕುಡಿಯುವ ನೀರಿನ ಸ್ವಿಚ್ಛ್ ಬೋರ್ಡ್ ಧ್ವಂಸ!

ಮಂಡ್ಯ: ಗ್ರಾಮದ ಕುಡಿಯುವ ನೀರಿನ ಬೋರ್ ವೆಲ್‍ಗೆ ಅಳವಡಿಸಿದ್ದ ಸ್ವಿಚ್ ಬೋರ್ಡ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಕಲ್ಲು ಎತ್ತಿ ಹಾಕಿ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸೋಮಯ್ಯ ಅವರ ಮಗ ಸೋಮೇಶ್ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮತ್ತು ಪೈಪ್‍ಗಳನ್ನು ಧ್ವಂಸಗೊಳಿಸಿದ್ದಾರೆ. ಸೋಮೇಶ್ ಅವರ ಜಮೀನಿನ ಪಕ್ಕದಲ್ಲೇ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿ ಇತ್ತು. ಹೀಗಾಗಿ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೋಮೇಶ್ ಅವರ ಜಮೀನಿನ ಮೇಲಿಂದ ವೈರ್ ಎಳೆದು ತರಲಾಗಿತ್ತು. ಆದರೆ ಈ ವೈರ್ ಗಳು ತಳಮಟ್ಟದಲ್ಲಿದ್ದು, ಜಮೀನು ಉಳುಮೆ ಮಾಡಲು ಕಷ್ಟವಾಗುತ್ತಿತ್ತು.

ಈ ಬಗ್ಗೆ ಪಿಡಿಓ ಮತ್ತು ವಾಟರ್ ಮ್ಯಾನ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಸೋಮೇಶ್, ಜಮೀನು ಉಳುವ ಸಂದರ್ಭದಲ್ಲಿ ಆಕ್ರೋಶಗೊಂಡು ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮೇಲೆ ಕಲ್ಲು ಎತ್ತಿಹಾಕಿ ಧ್ವಂಸ ಮಾಡಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಸೋಮೇಶ್ ಆಕ್ರೋಶದಿಂದ ಕಲ್ಲು ಎತ್ತಿ ಹಾಕುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *