ಪ್ರಿಯಕರನ ಜೊತೆ ಸೇರಿ ಜೆಡಿಎಸ್ ಮಾಜಿ ಅಧ್ಯಕ್ಷೆಯಿಂದ ಸ್ಯಾಂಡಲ್‍ವುಡ್ ಫೈನಾನ್ಶಿಯರ್ ಕಿಡ್ನಾಪ್!

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಹಣ ಹಾಕುವ ಕೋಟ್ಯಾಧಿಪತಿಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ನಾಲ್ವರು ಆರೋಪಿಗಳನ್ನು ನಗರದ ಪೊಲೀಸರು ಜೈಲಿಗಟ್ಟಿದ್ದು, ಇದೀಗ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ.

ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆರ್ಷಿಯಾ ತನ್ನ ಪ್ರಿಯಕರ ರೇಣುಕಾ ಪ್ರಸಾದ್ ಜೊತೆ ಸೇರಿ ಕೋಟ್ಯಾಧಿಪತಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ ಎಂಬವರನ್ನು ಜನವರಿ 11ರಂದು ಕಿಡ್ನಾಪ್ ಮಾಡಿದ್ದರು ಎಂಬುದಾಗಿ ತಿಳಿದುಬಂದಿದೆ.

ಏನಿದು ಘಟನೆ?: ಪ್ರಕರಣದ ಪ್ರಮುಖ ಆರೋಪಿ ರೇಣುಕಾ ಪ್ರಸಾದ್ ಮತ್ತು ಮೂವರು ಸೇರಿ ಸದ್ಯ ಕನ್ನಡ ಚಿತ್ರರಂಗದ ಬಹುತೇಕ ನಿರ್ಮಾಪಕರಿಗೆ ಫೈನಾನ್ಸ್ ಮಾಡ್ತಿದ್ದ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರ ಮಾಡ್ತಿರೊ ಕೋಟ್ಯಾಧೀಶ್ವರ ಮಲ್ಲಣ್ಣ ಅವರನ್ನು ಯಲಹಂಕದ ಮನೆಯ ಬಳಿಯಿಂದಲೇ ಅಪಹರಿಸಿದ್ದರು.

ಮಲ್ಲಣ್ಣ ದುಡ್ಡು ಬಿಚ್ಚೋದಿಲ್ಲ ಅಂತಾ ಕಿಡ್ನಾಪ್ ಮಾಡಿದ್ದ ಆರೋಪಿಗಳು ಬಳಿಕ ಮಲ್ಲಣ್ಣನ ಮುಖಕ್ಕೆ ಮಂಕಿ ಕ್ಯಾಪ್ ಉಲ್ಟಾ ಹಾಕಿ ಎಚ್ ಎಸ್ ಆರ್ ಲೇಔಟ್ ಗೆ ಕರೆದೊಯ್ದಿದ್ದರು. ಅಲ್ಲದೇ ಅವರಲ್ಲಿದ್ದ ಉಡದಾರದಿಂದಲೇ ಕೈ ಕಟ್ಟಿ ಹಾಕಿದ್ದರು. ಬಳಿಕ ಸುಮಾರು 80 ಲಕ್ಷ ಹಣ ವಸೂಲಿ ಮಾಡಿದ್ದಾರೆ.

ಇತ್ತ ಮಲ್ಲಣ್ಣ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಆರ್ಷಿಯಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ. ತನ್ನ ಕಾರ್‍ನ ಮುಂದೆ ಭಾರತ ಸರ್ಕಾರ ಅಂತಾ ಬೋರ್ಡ್ ಹಾಕಿಕೊಳ್ಳುವ ಮೂಲಕ ಪೊಲೀಸರನ್ನೇ ಯಾಮಾರಿಸಿದ್ದಾಳೆ. ಚಿಕ್ಕಬಳ್ಳಾಪುರದ ಬಳಿ ಪೊಲೀಸರು ಕಾರು ತಪಾಸಣೆ ಮಾಡೋದನ್ನು ನೋಡಿದ ಆರೋಪಿ ಪ್ರದೀಪ್ ಆರ್ಷಿಯಾ ಕಾರ್ ನಿಂದ ಇಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಪೊಲೀಸರು ಯಾರವರು ಇಳಿದು ಹೋದ್ರಲ್ಲ ಅಂದಿದ್ದಕ್ಕೆ, ಡ್ರಾಪ್ ಕೇಳಿ ಇಲ್ಲಿ ಇಳಿದು ಹೋದ್ರು ಅಂತ ಆರ್ಷಿಯಾ ಹೇಳಿದ್ದಳು.

ಪ್ರಕರಣದ ಆರೋಪಿಗಳು ಕೂಡ ಕೋಟ್ಯಾಧಿಪತಿಗಳೇ ಆಗಿದ್ದು, ಆರ್ಷಿಯಾ 20 ಕೋಟಿಯ ಒಡತಿಯಾಗಿದ್ದರೆ, ಆರೋಪಿ ಆರ್ಷಿಯಾ ಪ್ರಿಯಕರ ರೇಣುಕಾ ಪ್ರಸಾದ್ 300 ಕೋಟಿ ಆಸ್ತಿಯ ಒಡೆಯನಾಗಿದ್ದಾನೆ. ಮತ್ತೊಬ್ಬ ಆರೋಪಿ ಕಾಂತರಾಜ್ ಕೂಡ ನೂರಾರು ಎಕರೆ ಆಸ್ತಿಯ ಒಡೆಯನಾಗಿದ್ದು, ಎಚ್‍ಎಸ್‍ಆರ್ ಲೇಔಟ್ ನಲ್ಲಿ ಕಾಂತರಾಜ್ ಗೆ ಸೇರಿದ ನೂರಾರು ಎಕರೆ ಆಸ್ತಿಯಿದೆ ಎನ್ನಲಾಗಿದೆ.

ಕಿಡ್ನಾಪ್ ಗೆ ಕಾರಣ?: ಆರೋಪಿ ಕಾಂತರಾಜ್ ಅಣ್ಣ ಲಕ್ಷ್ಮೀಪತಿಗೆ ಮಲ್ಲಣ್ಣ ಸುಮಾರು 30 ಲಕ್ಷ ನೀಡಿದ್ದರು. ಆದ್ರೆ ಹಣ ವಾಪಸ್ ನೀಡದೇ, ಸರಿಯಾದ ಸಮಯಕ್ಕೆ ಬಡ್ಡಿಯೂ ನೀಡದೆ ಮಲ್ಲಣ್ಣನಿಗೆ ಆಟ ಆಡಿಸುತ್ತಿದ್ದರು. ಇದರಿಂದ ಸಿಟ್ಟುಗೊಂಡ ಮಲ್ಲಣ್ಣ ಲಕ್ಷ್ಮೀಪತಿಗೆ ಬೈದಿದ್ದಾರೆ. ಈ ಹಿನ್ನೆಲೆಯಲ್ಲಿ ಈತ ಎಲ್ಲರಿಗೂ ಹಣ ಕೊಡ್ತಾನೆ ನಮಗೆ ಕೊಡಲ್ಲ. ಈತನಿಗೆ ಸರಿಯಾದ ಬುದ್ಧಿ ಕಲಿಸಬೇಕು ಅಂತ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ರೇಣುಕಾ ಪ್ರಸಾದ್, ಮಲ್ಲಣ್ಣನಿಗೆ ಚಿರಪರಿಚಿತನಾಗಿದ್ದಾನೆ. ಮಲ್ಲಣ್ಣನ ಮಗ ಹಾಗೂ ರೇಣುಕಾ ಪ್ರಸಾದ್ ಇವರಿಬ್ಬರೂ ಕ್ಲಾಸ್ ಮೇಟ್ಸ್ ಗಳಾಗಿದ್ದಾರೆ. ಅಲ್ಲದೇ ಯಾರಾದರೂ ಹಣ ಬೇಕು ಅಂತ ಕೇಳಿದ್ರೆ ರೇಣುಕಾ ಪ್ರಸಾದ್ ಪ್ರತೀ ಬಾರಿಯೂ ಮಲ್ಲಣ್ಣನ ಬಳಿ ಕರೆದುಕೊಂಡು ಬಂದು ಬಡ್ಡಿಗೆ ಹಣ ಕೊಡಿಸುತ್ತಿದ್ದನು. ಮಲ್ಲಣ್ಣನ ಕೈಯಲ್ಲಿ ಸುಮಾರು 2 ಸಾವಿರ ಕೋಟಿ ಘೋಷಿತ ಆದಾಯವಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಇವರೇ ಹಣ ಹೂಡಿಕೆ ಮಾಡುತ್ತಿದ್ದರು.

ಘಟನೆಯ ಬಳಿಕ ಆರ್ಷಿಯಾಳನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ.

Comments

Leave a Reply

Your email address will not be published. Required fields are marked *