ರಾಹುಲ್ ಗಾಂಧಿ ಮುಂದೆ ಗುರು ಶಿಷ್ಯರ ಸೂತ್ರ – ಸಿದ್ದರಾಮಯ್ಯ ಸೂತ್ರವನ್ನ ಒಪ್ಪಿಕೊಂಡಿದ್ಯಾಕೆ ಹೆಚ್‍ಡಿಡಿ?

ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ 20:8ರಂತೆ ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಂಡಿವೆ. ಮೈಸೂರು ಕ್ಷೇತ್ರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಪಾಲಾಗುತ್ತಿದ್ದ ಮೈಸೂರನ್ನು ಸಿದ್ದರಾಮಯ್ಯ ಉಳುಸಿಕೊಂಡಿದ್ದರ ಹಿಂದಿನ ಕಹಾನಿ ಇಲ್ಲಿದೆ.

ಮೊಮ್ಮಗನಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಆದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಬೇಕೆಂದು ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ತವರು ಕ್ಷೇತ್ರ ಎಲ್ಲಿ ತಪ್ಪಲಿದೆ ಎಂಬುದನ್ನ ಅರಿತ ಸಿದ್ದರಾಮಯ್ಯನವರು ನೇರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಸಂಪರ್ಕಿಸಿ ಸೂತ್ರವೊಂದನ್ನು ಮುಂದಿಟ್ಟಿದ್ದರು.

ಏನದು ಸೂತ್ರ?
‘ನಿಮಗೆ ನಾವು, ನಮಗೆ ನೀವು’ ಎಂಬ ಸೂತ್ರ ಹೆಣೆದ ಸಿದ್ದರಾಮಯ್ಯನವರು ಹೈಕಮಾಂಡರ್ ಮುಂದಿಟ್ಟಿದ್ದರು. ಮೈಸೂರಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಡಿ, ಬೆಂಗಳೂರು ಉತ್ತರದಲ್ಲಿ ನಿಮ್ಮ ಅಭ್ಯರ್ಥಿ ಗೆಲ್ಲಿಸಿ ಕೊಡ್ತೀವಿ ಎಂಬ ಸೂತ್ರವನ್ನು ಇಟ್ಟಿದ್ದರಂತೆ. ನಾವು ನಿಮಗೆ ಮೋಸ ಮಾಡಲ್ಲ, ನೀವು ನಮಗೆ ಮೋಸ ಮಾಡಲ್ಲ. ಒಂದು ವೇಳೆ ಮೋಸವಾದ್ರೆ ಮೈತ್ರಿ ಸರ್ಕಾರವೇ ಇರಲ್ಲ ಹೇಳಿದ್ದಕ್ಕೆ ದೇವೇಗೌಡರು ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿಕೊಂಡರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿಯವರ ಮುಂದಿಟ್ಟ ಸೂತ್ರವನ್ನ ಒಪ್ಪಿಕೊಂಡ ಬಳಿಕವೇ ಸೀಟುಗಳ ಹಂಚಿಕೆ ಆಗಿದೆ. ಮೈತ್ರಿ ಧರ್ಮ ಪಾಲನೆಗೆ ಮೈಸೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳು ಅಖಾಡವಾಗಿ ಬದಲಾಗಿವೆ. ಯಾವ ಕ್ಷೇತ್ರದಲ್ಲಿ ಯಾರು ಮೈತ್ರಿ ಧರ್ಮ ಪಾಲನೆ ಮಾಡ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ಖಚಿತವಾಗಲಿದೆ.

28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳು ಕಾಂಗ್ರೆಸ್ ಇಟ್ಟುಕೊಂಡಿದ್ದರೆ, 8 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದೆ. ಶಿಷ್ಯ ಸಿದ್ದರಾಮಯ್ಯರ ಕ್ಷೇತ್ರವಾದ ಮೈಸೂರನ್ನು ಬಿಟ್ಟು ಕೊಟ್ಟಿಲ್ಲ. ಈಗ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರೋ ಕಾರಣ ಬೆಂಗಳೂರು ಉತ್ತರದಿಂದಲೇ ದೇವೇಗೌಡರು ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ.

https://www.youtube.com/watch?v=Ua8Eck_tgIk

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *