‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

– ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ

ಮಡಿಕೇರಿ: ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಬಾರದಿರುವ ಉಸ್ತುವಾರಿ ಸಚಿವರು ಮತ್ತು ಕೊಡಗು ಸಂಸದರನ್ನು ಹುಡುಕಿಕೊಡುವಂತೆ ಕೊಡಗು ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಎಸ್‍ಪಿಗೆ ದೂರು ನೀಡಿದ್ದಾರೆ.

ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಆಗಮಿಸಿಲ್ಲ. ರಾಜ್ಯದಲ್ಲಿ ಕೊರೊನಾ ಆತಂಕ ತೀವ್ರವಾಗಿದ್ದು, ಜಿಲ್ಲೆಯಲ್ಲಿಯೂ ಈಗಾಗಲೇ ನಾಲ್ಕು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ ನೆರೆಯ ಕೇರಳದಲ್ಲಿ ಮತ್ತು ಪಕ್ಕದ ಜಿಲ್ಲೆ ಮೈಸೂರಿನಲ್ಲಿ ಹಕ್ಕಿ ಜ್ವರ ಕೂಡ ತೀವ್ರಗೊಂಡಿದೆ. ಇಷ್ಟೆಲ್ಲಾ ಆದರೂ ಉಸ್ತುವಾರಿ ಸಚಿವರು ಮತ್ತು ಸಂಸದರು ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಎದುರಿಸುವುದಕ್ಕೆ ಅಗತ್ಯ ಔಷಧಿಗಳಿವೆಯಾ? ಅಥವಾ ಸೌಲಭ್ಯಗಳಿವೆಯಾ ಎಂದು ಪರಿಶೀಲನೆಯನ್ನೂ ಮಾಡಿಲ್ಲ. ಈ ಇಬ್ಬರನ್ನು ಯಾರಾದರೂ ಅಪಹರಣ ಮಾಡಿದ್ದಾರಾ? ಇಲ್ಲಾ ಕೊರೊನಾ ರೋಗವೇನಾದರೂ ಬಂದಿದೆಯಾ? ಇವೆಲ್ಲವನ್ನೂ ಪರಿಶೀಲಿಸಿ ಹುಡುಕಿಕೊಡಬೇಕು ಎಂದು ಎಸ್‍ಪಿಗೆ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ. 10 ದಿನಗಳಲ್ಲಿ ಉಸ್ತವಾರಿ ಸಚಿವ ಹಾಗೂ ಸಂಸದರನ್ನು ಹುಡುಕಿಕೊಡಬೇಕು ಇಲ್ಲದಿದ್ದರೆ ರಾಜ್ಯ ಉಚ್ಛನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಸ್‍ಪಿ ಸುಮನ್ ಡಿ.ಪಿ ಅವರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments

Leave a Reply

Your email address will not be published. Required fields are marked *