ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟ – ಫ್ರೆಂಡ್ಲಿ ಫೈಟ್ ಮಾಡ್ತೇವೆ: ಸಾರಾ ಮಹೇಶ್

ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕ ಸ್ಪರ್ಧೆ ಮಾಡುತ್ತೇವೆ. ಆ ಮೂಲಕ ಫ್ರೆಂಡ್ಲಿ ಫೈಟ್ ನಡೆಸುತ್ತೇವೆ. ಒಂದು ವೇಳೆ ವರಿಷ್ಠರು ತೀರ್ಮಾನ ಮಾಡಿದರೆ ಒಂದಾಗುತ್ತೇವೆ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಇಲ್ಲ. ಮೈತ್ರಿ ಸರ್ಕಾರ ಇದ್ದರು ಕೂಡ ಪ್ರತ್ಯೇಕ ಪ್ರತ್ಯೇಕ ಸ್ಪರ್ಧೆ ಮಾಡಿ, ಫ್ರೆಂಡ್ಲಿ ಫೈಟ್‍ಗೆ ನಿರ್ಧಾರ ಮಾಡಲಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಎರಡು ಪಕ್ಷಗಳಿಗೆ ಕಷ್ಟ ಆಗುವುದರಿಂದಲೇ ಚಿಂತನೆ ನಡೆಸಲಾಗಿದೆ. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

ಒಂದೊಮ್ಮೆ ನಾಯಕರ ಹಂತದಲ್ಲಿ ಹೊಂದಾಣಿಕೆ ಮುಂದಾದರು ಅದು ಯಶಸ್ವಿ ಆಗುವುದಿಲ್ಲ. ಏಕೆಂದರೆ ಹಲವು ವರ್ಷಗಳಿಂದ ತಳಮಟ್ಟದಲ್ಲಿ ಪಕ್ಷಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿರುತ್ತಾರೆ. ಈಗ ಹೊಂದಾಣಿಕೆ ಎಂದರೆ ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇಲ್ಲವಾದರೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರೆ ಎಂದರು.

ಇದೇ ವೇಳೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ಸಚಿವ ಜಿಟಿಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಜಿಟಿ ದೇವೆಗೌಡರು ಅವರಿಗಿರುವ ಮಾಹಿತಿ ಮೇರೆಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಒಂದು ಬೂತ್ ವಿಚಾರವಾಗಿ ಮಾತ್ರ ಜಿಟಿಡಿ ಅವರು ಹೇಳಿಕೆ ನೀಡಿದ್ದು ನಿಜ. ಇಡೀ ಲೋಕಸಭಾ ವ್ಯಾಪ್ತಿಯಲ್ಲಿ ನಾಯಕರು ತೀರ್ಮಾನಿಸಿದಂತೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಮೈಸೂರಿನಲ್ಲೂ ಕಡಿಮೆ ಅಂತರದಿಂದ ಗೆಲುವು ಪಡೆಯುತ್ತೇವೆ ಎಂದರು.

Comments

Leave a Reply

Your email address will not be published. Required fields are marked *