ಟಿಕೆಟ್‍ಗಾಗಿ ಕೃಷ್ಣ ಮುಖ್ಯಪ್ರಾಣ – ಈಶ್ವರನ ಮೊರೆ ಹೋದ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು

ಉಡುಪಿ: ಈ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಜಯಪ್ರಕಾಶ್ ಹೆಗ್ಡೆಗೆ ಸಿಗಲಿ ಎಂದು ಅವರ ಬೆಂಬಲಿಗರು ದೇವರ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಿಲ್ಲೆಯ ಶ್ರೀಕೃಷ್ಣಮಠ- ಅನಂತೇಶ್ವರ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಯಪ್ರಕಾಶ ಹೆಗ್ಡೆ ಜೆಡಿಎಸ್‍ಗೆ ಹೋಗಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಅವರಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಅವರ ನೂರಾರು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹಾಗೆಯೇ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ನಂತರ ಜನರ ಜೊತೆ ಇಲ್ಲದೆ, ಆಗಾಗ ಬಂದು ಹೋಗುವ, ರಾಜ್ಯಾದ್ಯಂತ ಪ್ರವಾಸ ಮಾಡುವ, ಟಿವಿಯಲ್ಲಿ ಮಾತ್ರ ಕಾಣುವ ಸಂಸದೆ ನಮಗೆ ಬೇಡ ಎಂದು ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಹೆಬ್ರಿ ಆಕ್ರೋಶ ವ್ಯಕ್ತಗೊಳಿಸಿದರು.

ಉಡುಪಿ ಶ್ರೀಕೃಷ್ಣ ಪರಮಾತ್ಮ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಮೋದಿ ಮತ್ತೆ ದೇಶದ ಪ್ರಧಾನಿ ಆಗಬೇಕು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಇರುವ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡಬೇಕು. ಜನರ ಅಭಿಪ್ರಾಯ ಪರಿಗಣಿಸಬೇಕು. ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಬಾರದು ಅಂತ ಅಲ್ಲ. ಆದ್ರೆ ಹೆಗ್ಡೆಯವರಿಗೆ ಟಿಕೆಟ್ ಕೊಟ್ಟರೆ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ. ಕಾರ್ಯಕರ್ತರ ಒಕ್ಕೊರಲ ಧ್ವನಿಗೆ ಬೆಲೆ ಸಿಗುತ್ತದೆ ಎಂದು ಜಯಪ್ರಕಾಶ್ ಹೆಗ್ಡೆ ಅಭಿಮಾನಿ ಹರೀಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಬಿಜೆಪಿ ಮುಖಂಡ ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯ ಕೃಷ್ಣನಾಡಿನಿಂದ ಪಾಂಚಜನ್ಯ ಮೊಳಗಿಸಿದ್ದೇವೆ. 16ನೇ ದಿನಾಂಕದಂದು ಜನರಿಗೆ ಸಿಗುವ ಹಾಗೂ ಅವರೊಂದಿಗೆ ಬೆರೆಯುವ ಅಭ್ಯರ್ಥಿ ಆಯ್ಕೆಯಾಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಪಕ್ಷದ ಹಿರಿಯ ನಾಯಕರಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇದೆ. ಶೋಭಾ ಕರಂದ್ಲಾಜೆಯವರ ಸಾಧನೆ ಬಗ್ಗೆ ಯಾರಿಗೂ ನೋವು ಇಲ್ಲ. ಅವರ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಆದ್ರೆ ರಾಜ್ಯ ನಾಯಕರು ಬೇರೆ ಬೇರೆ ಹೋರಾಟದಲ್ಲಿ ತೊಡಗಿದ್ದಾಗ ಕ್ಷೇತ್ರಕ್ಕೆ ಬರುವುದು ಕಷ್ಟಸಾಧ್ಯ ಎಂದೂ ಹೇಳಿದರು.

ಈಗಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ಆಗಿದೆ. ಸಮೀಕ್ಷೆಯ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ ಆಗಬೇಕು. ಅಭ್ಯರ್ಥಿಯ ಆಯ್ಕೆಯ ತನಕ ಹೋರಾಟ ನಡೆಯುತ್ತೆ, ಬಳಿಕ ಅಭ್ಯರ್ಥಿ ಘೋಷಣೆಯಾದ ನಂತರ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡುವುದಾಗಿ ಕಾರ್ಯಕರ್ತರು ಅಭಿಪ್ರಾಯವನ್ನು ಹಂಚಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *