ಕೂಡಲ ಸಂಗಮ ಸ್ವಾಮೀಜಿ ಕಾರು ಅಪಘಾತ

ಕೊಪ್ಪಳ: ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತೆರಳುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕೊಪ್ಪಳದ ಕುಷ್ಟಗಿ ಪಟ್ಟಣದ ಹೊರವಲಯದ ಬೃಂದಾವನ ಹೋಟೆಲ್ ಬಳಿ ಘಟನೆ ಸಂಭವಿಸಿದ್ದು, ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಶಾಖಾಪುರ ಗ್ರಾಮದ ನಾಗರಾಜ ಬಾಲಶಂಕರ ಕಟ್ಟಿ ಹಾಗೂ ಶರಣಬಸವ ಮಲ್ಲಿಕಾರ್ಜುನ ಗೋಗೇರಿ ಎಂದು ಗುರುತಿಸಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಹೊಸಪೇಟೆ ಕಡೆ ತೆರಳುತ್ತಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸದರು.

ಮಾನವೀಯತೆ ಮೆರೆದ ಶ್ರೀ
ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿಜಯಪುರದಲ್ಲಿ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಮುಗಿಸಿಕೊಂಡು ದಾವಣಗೆರೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕುಷ್ಟಗಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಬೃಂದಾವನ ಹೋಟಲ್ ಹತ್ತಿರ ಬೈಕ್ ಸವಾರರು ಡಿವೈಡರ್ ದಾಟುವ ಅವಸರದಲ್ಲಿ ನಮ್ಮ ಕಾರಿಗೆ ಡಿಕ್ಕಿ ಹೊಡೆದರು. ಪರಿಣಾಮ ಬೈಕ್ ಸವಾರರ ಕಾಲಿಗೆ ಗಾಯವಾಗಿದ್ದು, ಕೂಡಲೇ ಭಕ್ತರ ಕಾರನ್ನು ತರಿಸಿಕೊಂಡು ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ಶ್ರೀಗಳು ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರ, ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಸಾಕಷ್ಟು ಭಕ್ತರು ಶ್ರೀಗಳನ್ನು ಭೇಟಿ ಮಾಡಿ ಘಟನೆ ಕುರಿತು ಮಾಹಿತಿ ಪಡೆದರು.

Comments

Leave a Reply

Your email address will not be published. Required fields are marked *