ಜಯಲಲಿತಾ ಅಕ್ರಮ ಆಸ್ತಿ ಕೇಸ್: ರಾಜ್ಯದ ಮರುಪರಿಶೀಲನಾ ಅರ್ಜಿ ವಜಾ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾರನ್ನು ಕೈ ಬಿಟ್ಟು ತೀರ್ಪು ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ಬುಧವಾರ ತಮ್ಮ ಛೇಬಂರ್ ನಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತಾವ್ ರಾಯ್ ನೇತೃತ್ವದ ಪೀಠ ರಾಜ್ಯದ ಅರ್ಜಿ ವಜಾ ಮಾಡಿ ಆದೇಶ ಪ್ರಕಟಿಸಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮೊದಲ ಆರೋಪಿಯಾಗಿದ್ದರು. ಆದರೆ ತೀರ್ಪು ಬರುವ ಮೊದಲೇ ಜಯಲಲಿತಾ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರ ಹೆಸರನ್ನು ಕೈಬಿಟ್ಟು ಶಶಿಕಲಾ ಸೇರಿದಂತೆ ಮೂವರಿಗೆ ಸುಪ್ರಿಂಕೊರ್ಟ್ ಶಿಕ್ಷೆ ಪ್ರಕಟ ಮಾಡಿತ್ತು.

ಸುಪ್ರೀಂಕೋರ್ಟ್ ಈ ಆದೇಶ ವನ್ನು ಪ್ರಶ್ನಿಸಿದ್ದ ಕರ್ನಾಟಕ ಸರ್ಕಾರ, ಜಯಲಲಿತಾ ಕೇಸ್ ವಿಚಾರಣೆ ವೇಳೆ ಸಾವನ್ನಪ್ಪಿಲ್ಲ, ತೀರ್ಪು ಕಾಯ್ದಿರಿಸಿದ ನಂತರ ಮೃತಪಟ್ಟಿದ್ದಾರೆ. ಹೀಗಾಗಿ ಅವರನ್ನು ಅಪರಾಧಿ ಅಂತಾ ಪರಿಗಣಿಸಿ ಕೆಳ ನ್ಯಾಯಲಯ ವಿಧಿಸಿದ ನೂರು ಕೋಟಿ ದಂಡವನ್ನು ವಸೂಲಿ ಮಾಡಬೇಕು ಎಂದು ಮನವಿ ಮಾಡಿತ್ತು.

ಈ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಮಿತಾವ್ ರಾಯ್ ನೇತೃತ್ವದ ಪೀಠ ಜಯಲಲಿತಾ ಅವರನ್ನ ಪ್ರಕರಣದಿಂದ ಕೈಬಿಡಲಾಗಿದ್ದು ದಂಡ ವಸೂಲಿ ಸಾಧ್ಯವಿಲ್ಲ ಎಂದು ಹೇಳಿ ರಾಜ್ಯದ ಅರ್ಜಿಯನ್ನು ವಜಾಗೊಳಿಸಿದೆ.

ಬೆಂಗಳೂರಿನ ವಿಶೇಷ ಕೋರ್ಟ್ 2014ರ ಸೆಪ್ಟೆಂಬರ್‍ನಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ತೀರ್ಪು ನೀಡಿ, 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡವನ್ನು ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತ್ತು.

2016 ಡಿಸೆಂಬರ್ 5 ರಂದು ಜಯಲಲಿತಾ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, 2017ರ ಫೆ.14ರಂದು ಶಶಿಕಲಾ, ಇಳವರಸಿ, ಸುಧಾಕರನ್ ಈ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

Comments

Leave a Reply

Your email address will not be published. Required fields are marked *