ಯೋಗಿ ನಿವಾಸಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಶವ ರೈಲ್ವೇ ಹಳಿ ಮೇಲೆ ಪತ್ತೆ!

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನಿವಾಸಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯೊಬ್ಬರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಿಬ್ಬಂದಿಯನ್ನು ಘಾಜಿಯಾಬಾದ್‌ನ 47ನೇ ಬೆಟಾಲಿಯನ್, ಎಚ್-ದಲ್ ಪಿಎಸಿಗೆ ಸೇರಿದ ಅಂಕುರ್ ಕುಮಾರ್ (26) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಭಾನುವಾರ ಮುಂಜಾನೆ 6:30ರ ಸುಮಾರಿಗೆ ಗುಲಾ ಫಾಟಕ್ ಬಳಿ ಪತ್ತೆಯಾಗಿದೆ. ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮೊಬೈಲ್ ಫೋನ್ ಹತ್ತಿರದಲ್ಲಿ ಕಂಡುಬಂದಿದ್ದು, ಕರೆ ಮಾಡಿದಾಗ, ರಿಂಗ್‌ ಆಗಿದ್ದರಿಂದ ಶವದ ಗುರುತು ಪತ್ತೆಹಚ್ಚಲು ಸಹಕಾರಿ ಆಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.

ಮೃತ ಅಂಕುರ್‌ ಕುಮಾರ್ ಅವರು ಮುಜಾಫರ್‌ನಗರದ ಸಿಖೇಡಾ ಪೊಲೀಸ್ ಠಾಣೆ ಪ್ರದೇಶದ ಮನೋಹರ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಅವರ ಪುತ್ರ.‌ ಅವರನ್ನು ಲಕ್ನೋದಲ್ಲಿರುವ (Lucknow) ಮುಖ್ಯಮಂತ್ರಿ ನಿವಾಸದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಂಕುರ್‌ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.