ಯಾದಗಿರಿಯಲ್ಲಿ ಏ.20-21ರಂದು ಜಾತ್ರೆ: ಭಕ್ತರಿಗೆ ಜಲ ಸಂಕಷ್ಟದ ಭೀತಿ!

ಯಾದಗಿರಿ: ಗ್ರಾಮವೊಂದರ ಕೆರೆ ಬಾವಿ ಬತ್ತಿದ ಪರಿಣಾಮ ಈಗ ಅಲ್ಲಿ ನೀರಿನ ಹಾಹಾಕಾರ ಭುಗಿಲೆದ್ದಿದೆ. ಒಂದು ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಹೀಗಿರುವಾಗ ಇನ್ನೆರಡು ದಿನಗಳಲ್ಲಿ ಆ ಗ್ರಾಮದ ಬಹು ದೊಡ್ಡ ಜಾತ್ರೆ ಹಿನ್ನೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಆಗಮಿಸುವ ಹಿನ್ನೆಲೆಯಲ್ಲಿ ಈ ಬಾರಿ ಜಲ ಸಂಕಷ್ಟದ ಭೀತಿ ಎದುರಾಗಲಿದೆ. ನೀರಿಲ್ಲದೆ ಗ್ರಾಮದ ಜಾತ್ರೆ ನಡೆಸೋದು ಹೇಗೆ ಅನ್ನೋ ಚಿಂತೆ ಆ ಗ್ರಾಮಸ್ಥರಿಗೆ ಕಾಡುತ್ತಿದೆ.

ಹೌದು. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಕೆರೆ, ಬಾವಿ, ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಗ್ರಾಮದ ದೇವಸ್ಥಾನದ ಎದರುಗಡೆ ಗ್ರಾಮಸ್ಥರು ಜಾತ್ರೆಯ ಸಿದ್ಧತೆ ನಡೆಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈಗ ನೀರಿನ ಹಾಹಾಕಾರ ಆರಂಭವಾಗಿದೆ. ಅದರಂತೆ ಈ ಗ್ರಾಮದಲ್ಲೂ ಕೂಡಾ ನೀರಿಗಾಗಿ ಜನ ಸಂಕಷ್ಟ ಪಡುವಂತಾಗಿದೆ. ಹೀಗಿರುವಾಗ ಈ ಭಾಗದಲ್ಲೆ ಪ್ರಸಿದ್ಧಿ ಪಡೆದ ಶರಣಬಸವೇಶ್ವರ ಜಾತ್ರೆ ಇದೆ. 20 ಮತ್ತು 21 ರಂದು ಎರಡು ದಿನ ನಡೆಯಲಿರುವ ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ಪಾಲ್ಗೊಳ್ಳಲಿದ್ದಾರೆ. ಜಾತ್ರೆ ಅಂಗವಾಗಿ 200 ನವಜೋಡಿ ಸಾಮೂಹಿಕ ವಿವಾಹ ಎರ್ಪಡಿಸಲಾಗಿದೆ. ಇಲ್ಲಿ ಬಹುದೊಡ್ಡ ಎತ್ತಿನ ಸಂತೆ ನಡೆಯಲಿದು,್ದ ಜಾನುವಾರಗಳಿಗೆ ನೀರಿನ ದಾಹ ಹೇಗೆ ತಣಿಸಬೇಕು ಅನ್ನೋದು ಬಗ್ಗೆ ಚಿಂತೆ ಶುರುವಾಗಿದೆ. ಅದಲ್ಲದೆ ರೈತರಿಗೆ ಕೃಷಿಗಾಗಿ ಬೇಕಾದಂತಹ ಎಲ್ಲಾ ಸಾಮಾಗ್ರಿಗಳು ಈ ಜಾತ್ರೆಯಲ್ಲಿ ದೊರೆಯತ್ತವೆ. ಈ ಹಿನ್ನೆಲೆಯಲ್ಲಿ ಎರಡು ದಿನ ನಡೆಯಲಿರುವ ಈ ಜಾತ್ರೆಗೆ ಬಂದ ಭಕ್ತರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡಲಿದ್ದು ಈ ಜಾತ್ರೆಗೆ ನೀರಿನ ಸಂಕಷ್ಟ ಎದುರಾಗುವ ಭೀತಿ ದೇವಸ್ಥಾನದ ಆಡಳಿತ ಮಂಡಳಿ ಸೇರಿದಂತೆ ಗ್ರಾಮಸ್ಥರಿಗೆ ಕಾಡುತ್ತಿದೆ.

ಜಾತ್ರೆ ಅಂಗವಾಗಿ ಗ್ರಾಮಸ್ಥರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ತಮ್ಮ ಗ್ರಾಮದ ಕೆರೆ ಮತ್ತು ಬಾವಿಗಳಿಗೆ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಜಿಲ್ಲಾ ಪಂಚಾಯತ್ ನಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು. ತಮ್ಮ ಮನವಿಯಂತೆ ತಮ್ಮ ಗ್ರಾಮದ ಕೆರೆ ಬಾವಿಗೆ ನೀರು ಹರಿಸಲು ಜಿಲ್ಲಾ ಪಂಚಾಯತ್ ವತಿಯಿಂದ 5 ಲಕ್ಷ ಹಣ ಕೂಡಾ ಬಿಡುಗಡೆ ಮಾಡಲಾಗಿತ್ತು. ಆದ್ರೆ ಇವರ ಮನವಿ ಪ್ರಕಾರ ಜಿಲ್ಲಾ ಪಂಚಾಯತ್ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳಿಗೆ ಜಿಲ್ಲಾಡಳಿತ ಮೂಲಕ ಯಾವುದೇ ಅಧಿಕೃತವಾದ ಸೂಚನೆ ಬಂದಿಲ್ಲ. ಈಗಾಗಲೇ ನಾರಾಯಣಪುರ ಡ್ಯಾಮ್ ನಲ್ಲಿ ನೀರಿನ ಅಭಾವ ಎದುರಾಗಿದ್ದು ಪರಿಣಾಮ ಆ ಗ್ರಾಮದ ಕೆರೆ ಬಾವಿಗೆ ನೀರು ಬಿಡಲಾಗುವುದಿಲ್ಲ ಅಂತ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಜರಿಯುತ್ತಿದ್ದಾರೆ.

ಒಟ್ಟಾರೆಯಾಗಿ ಎರಡು ದಿನ ನಡೆಯಲಿರುವ ನಗನೂರು ಗ್ರಾಮದ ಶರಣಬಸವೇಶ್ವರ ದೇವರ ಬಹುದೊಡ್ಡ ಜಾತ್ರೆಗೆ ನೀರಿನ ಸಂಕಷ್ಟ ತಲೆದೂರಿದೆ. ಈ ಜಾತ್ರೆಗೆ ಬರುವ ಭಕ್ತರಿಗೆ ಮತ್ತು ಜಾನುವಾರುಗಳಿಗೆ ಜಿಲ್ಲಾಡಳಿತ ನೀರು ಪೂರೈಸುವ ಮೂಲಕ ಜಾತ್ರೆ ಸುಗಮವಾಗಿ ನಡೆಯುವಂತೆ ಮಾಡಲು ಗ್ರಾಮಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕಿದೆ.

Comments

Leave a Reply

Your email address will not be published. Required fields are marked *