ನವದೆಹಲಿ: ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.
ಜಾರಕಿಹೊಳಿ ಸಹೋದರರ ಸಮಸ್ಯೆಯು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಈ ಸಂಬಂಧ ಇಂದು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಪ್ರಮುಖ ಕೈ ನಾಯಕರು ಹಾಜರಾಗಿದ್ದಾರೆ.

ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿರುವ ಡಿಸಿಎಂ ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಸಂಜೆ ಐದು ಗಂಟೆಗೆ ಎಲ್ಲಾ ರಾಜ್ಯ ನಾಯಕರು ಸೇರಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇವೆ. ಭೇಟಿ ವೇಳೆ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹಾಗೂ ನಿಗಮ ಮಂಡಳಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಪ್ರಮುಖವಾಗಿ ರಾಜ್ಯ ರಾಜಕಾರಣದ ಬೆಳವಣಿಗೆಗೆ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದರು.
ಈ ವೇಳೇ ಮಾತನಾಡಿ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಕೇಂದ್ರದ ಮುಂದೆ ತಮ್ಮ ಸಮಸ್ಯೆ ಹಾಗೂ ಬೇಡಿಕೆಯನ್ನು ಇಟ್ಟಿದ್ದಾರೆ. ಅವುಗಳನ್ನು ಬಗೆಹರಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಈಗಾಗಲೇ ನಾವು ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗುತ್ತಿಲ್ಲ ಎನ್ನುವ ಅಸಮಾಧಾನವಿದೆ. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲಿದ್ದು, ಹೈಕಮಾಂಡ್ ನಿರ್ದೇಶನದ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲದೇ ಇಂದು ಅಥವಾ ನಾಳೆ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗುತ್ತದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply