ರಾಜೀನಾಮೆ ಘೋಷಿಸಿದ ಜಪಾನ್‌ ಪ್ರಧಾನಿ ಶಿಗೇರು ಇಶಿಬಾ

ಟೊಕಿಯೊ: ಜಪಾನ್‌ ಪ್ರಧಾನಿ ಶಿಗೇರು ಇಶಿಬಾ (Shigeru Ishiba) ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಅಧಿಕಾರಕ್ಕೇರಿ ಒಂದು ವರ್ಷ ಅವಧಿ ಪೂರೈಸುವುದಕ್ಕಿಂತ ಮೊದಲೇ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಕಳೆದುಕೊಂಡು ರಾಜೀನಾಮೆ ಘೋಷಿಸಿದ್ದಾರೆ.

ವಿಶ್ವದ 4ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಜಪಾನ್‌ನಲ್ಲಿ (Japan) ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಾರು ಉದ್ಯಮದ ಮೇಲೆ ಅಮೆರಿಕ ಹೇರಿದ ಸುಂಕವು ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಈ ನಡುವೆಯೆ ಪ್ರಧಾನಿ ಶಿಗೇರು ರಾಜೀನಾಮೆ ಘೋಷಿಸಿದ್ದಾರೆ. ಈಗ ವಿಶ್ವದ 4ನೇ ಆರ್ಥಿಕತೆಯಾದ ಜಪಾನ್‌ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಕುತೂಹಲ ಹುಟ್ಟಿಕೊಂಡಿದೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್‌ ಹೊಡೆದ ಟ್ರಂಪ್‌

ಸದ್ಯ ಅಮೆರಿಕದ ಸುಂಕದ ಕ್ರಮಗಳ ಕುರಿತ ಮಾತುಕತೆಗಳು ಒಂದು ತೀರ್ಮಾನಕ್ಕೆ ಬಂದಿವೆ. ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಪಕ್ಕಕ್ಕೆ ಸರಿದು ಮುಂದಿನ ತಲೆಮಾರಿಗೆ ದಾರಿ ಮಾಡಿಕೊಡಲು ತೀರ್ಮಾನಿಸಿದ್ದೇನೆ ಎಂದು ಇಶಿಬಾ ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

ಇಶಿಬಾ ರಾಜೀನಾಮೆ ಏಕೆ?
ದೀರ್ಘಕಾಲದ ವರೆಗೆ ಜಪಾನ್‌ ಆಳಿದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP)ಯಿಂದ ಇಶಿಬಾ ಪ್ರಧಾನಿ ಹುದ್ದೆಗೇರಿದ್ದರು. ಈಗ ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ತಮ್ಮದೇ ಪಕ್ಷದ ಕೆಲ ಬಲಪಂಥೀಯ ನಾಯಕರು ಇಶಿಬಾ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದರು. ಆದ್ರೆ ಇಶಿಬಾ ಈ ಒತ್ತಾಯವನ್ನ ವಿರೋಧಿಸುತ್ತಲೇ ಬಂದಿದ್ದರು. ಆ ಬಳಿಕ ಹೊಸ ನಾಯಕನನ್ನ ಮತ ಚಲಾವಣೆ ಮೂಲಕ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಇಶಿಬಾ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷ ವಿಭಜನೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.