ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸ್ರು ಹೇಗೆ ಬಂದಿದ್ದು ಗೊತ್ತಾ?

ಬೆಂಗಳೂರು: ಡೀಲ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೆಸರು ತುಳುಕು ಹಾಕಿಕೊಂಡಿದೆ. ಬಂಧನ ಭೀತಿ ಹಿನ್ನೆಲೆಯಲ್ಲಿ ಗಣಿ ಧಣಿ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಪತ್ತೆಗಾಗಿ ವಿಶೇಷ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ. ಆಂಬಿಡೆಂಟ್ ಕಂಪನಿಯ ಮೋಸದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹೆಸರು ಕೇಳಿಬಂದಿದ್ದು, ಹಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.

15 ದಿನದ ಹಿಂದೆ ಅಂಬಿಡೆಂಟ್ ಪ್ರಕರಣ ಎಡಿಜಿಪಿ ಅಲೋಕ್ ಕುಮಾರ್ ಬಳಿ ಬಂದಿತ್ತು. ಅಂಬಿಡೆಂಟ್ ಕಂಪನಿ ನೂರಾರು ಕೋಟಿ ರೂ. ಮೋಸ ಮಾಡಿದೆ ಎಂದು ಪ್ರಕರಣ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುವ ಮುನ್ನವೇ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್ ನನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅಲೋಕ್ ಕುಮಾರ್ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಫರೀದ್ ಗೆ ಹೂಡಿಕೆದಾರರಿಗೆ ಹಣ ಹಿಂದಿರುಗಿ ಕೊಡಲಿಲ್ಲ ಅಂದ್ರೆ ನಿನ್ನ ಬಿಡಲ್ಲ ಅಂತಾ ಎಚ್ಚರಿಸಿದ್ದಾರೆ.

ಪೊಲೀಸ್ ಭಾಷೆಗೆ ಹೆದರಿದ ಫರೀದ್ ಕೆಲವೇ ದಿನಗಳಲ್ಲಿ ಎಲ್ಲ ಹೂಡಿಕೆದಾರರ ಹಣವನ್ನು ಹಿಂದಿರುಗಿ ನೀಡುತ್ತೇನೆ ಅಂತಾ ಹೇಳಿದ್ದಾನೆ. ಒಂದು ವೇಳೆ ಇ.ಡಿ ವಶಕ್ಕೆ ಪಡೆದಿರುವ ಹಣ ನೀಡಿಲ್ಲ ಅಂದ್ರೆ ಏನ್ ಮಾಡ್ತೀಯಾ ಎಂದು ಪೊಲೀಸರು ಕೇಳಿದ್ದಾರೆ. ನಾನು ಕೆಲ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಇಡಿ ಪ್ರಕರಣದಿಂದ ಹೊರಬರುತ್ತೇನೆ ಎಂಬ ಸ್ಫೋಟಕ ಸತ್ಯವನ್ನು ಹೊರಹಾಕಿದ್ದಾರೆ.

ಯಾರು ‘ಆ’ ಪ್ರಭಾವ ವ್ಯಕ್ತಿ?
ನನಗೆ ಒಂದು ಕಾಂಟ್ಯಾಕ್ಟ್ ಇದೆ. ಆ ವ್ಯಕ್ತಿ ಆದಷ್ಟೂ ಬೇಗ ಹಣ ಕೊಡಿಸುತ್ತಾನೆ ಅಂತ ಫರೀದ್ ಹೇಳಿದ್ದಾನೆ. ಆರಂಭದಲ್ಲಿ ಹೆಸರು ಹೇಳಲು ಹಿಂದೇಟು ಹಾಕಿದಾಗ ಪೊಲೀಸ್ ಭಾಷೆಯಲ್ಲಿಯೇ ಕೇಳಿದ್ದಾರೆ. ಆವಾಗ ಅಲೋಕ್ ಕುಮಾರ್ ಬಳಿ ಜನಾರ್ದನರೆಡ್ಡಿ ಆಪ್ತ ಅಲಿಖಾನ್ ಹೆಸರನ್ನು ಫರೀದ್ ಖಾನ್ ರಿವೀಲ್ ಮಾಡ್ತಾನೆ. ಜನಾರ್ದನ ರೆಡ್ಡಿ ಹೆಸರು ಕೇಳುತ್ತಿದ್ದಂತೆ ಅಲೋಕ್ ಕುಮಾರ್ ಸಹ ಒಂದು ಕ್ಷಣ ಶಾಕ್ ಗೆ ಒಳಗಾಗಿದ್ದಾರೆ.

ಜನಾರ್ದನ ರೆಡ್ಡಿ ಹೆಸರು ಕೇಳಿಬರುತ್ತಿದ್ದಂತೆ ಅಲೋಕ್ ಕುಮಾರ್ ನೇರವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಫರೀದ್ ಹೇಳಿಕೆ ಕೊಟ್ಟಾಗ ರಾಜ್ಯದಲ್ಲಿ ಉಪ ಚುನಾವಣೆಯ ಬಿಸಿ ಹೆಚ್ಚಾಗಿತ್ತು. ಒಂದು ವೇಳೆ ಈಗ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ರೆ ಬೇರೆ ಅರ್ಥ ಬರಲಿದೆ. ಹಾಗಾಗು ಉಪ ಚುನಾವಣೆಯ ಬಳಿಕ ವಿಚಾರಣೆಯನ್ನು ಚುರುಕುಗೊಳಿಸಿ ಅಂತಾ ಸೂಚಿಸಿದ್ದಾರೆ. ಅದು ಹೇಗೂ ಸಿಸಿಬಿ ಪೊಲೀಸರಿಂದ ಮಾಹಿತಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅಲಿ ಖಾನ್ ಜಾಮೀನು ಪಡೆದುಕೊಂಡಿದ್ದಾನೆ. ಇತ್ತ ಜನಾರ್ದನ ರೆಡ್ಡಿ ಮೊಳಕಾಲ್ಮೂರು ತೋಟದ ಮನೆಯಿಂದ ನಾಪತ್ತೆಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *