ಎನ್‍ಕೌಂಟರ್ ಬೆನ್ನಲ್ಲೇ ಯೂಟರ್ನ್ ಹೊಡೆದ ಪವನ್ ಕಲ್ಯಾಣ್

ಹೈದರಾಬಾದ್: ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದಕ್ಕೆ ನನ್ನ ಸಹಮತವಿಲ್ಲ ಎಂದಿದ್ದ ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ ಯೂಟರ್ನ್ ಹೊಡೆದಿದ್ದಾರೆ.

ಎನ್‍ಕೌಂಟರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪವನ್ ಕಲ್ಯಾಣ್, ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ತ್ವರಿತ ನ್ಯಾಯ ಸಿಗಬೇಕಾಗುತ್ತದೆ. ಯುವತಿಯರು, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷೆಯನ್ನು ಸಾರ್ವಜನಿಕವಾಗಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಎಸಗಿದ್ದಕ್ಕೆ ಗುಂಡೇಟು – ಕನ್ನಡದಲ್ಲಿ ವಿವರಿಸಿದ ಸಜ್ಜನರ್

ನಿರ್ಭಯ ಪ್ರಕರಣದ ನಂತರ ನಮ್ಮ ಸಂಸತ್ತು ಬಲವಾದ ಕಾನೂನನ್ನು ಜಾರಿಗೆ ತಂದಿದೆ. ಆದರೂ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ. ದೇಶಾದ್ಯಂತ ಇನ್ನೂ ಇಂತಹ ಭೀಕರ ಅಪರಾಧಗಳು ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಶೀಘ್ರವೇ ಪರಿಹರಿಸಬೇಕು ಹಾಗೂ ತನಿಖೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

ತಿರುಪತಿಯಲ್ಲಿ ಮೂರು ದಿನಗಳ ಹಿಂದೆ ಜನಸೇನೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪವನ್ ಕಲ್ಯಾಣ್, ಸಹೋದರಿ ಪಶುವೈದ್ಯೆ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಇಡೀ ದೇಶವೇ ಒತ್ತಾಯಿಸುತ್ತಿದೆ. ಜನ ಆಕ್ರೋಶಕ್ಕೊಳಗಾಗಿ ಹೀಗೆ ಆಗ್ರಹಿಸುತ್ತಿದ್ದಾರೆ. ಸಂವಿಧಾನ ಯಾರಿಗೂ ಯಾರನ್ನು ಕೊಲ್ಲುವ ಹಕ್ಕು ನೀಡಿಲ್ಲ. ಆದ್ದರಿಂದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಬದಲಿಗೆ ಸಿಂಗಾಪುರ್ ಮಾದರಿಯಲ್ಲಿ ಶಿಕ್ಷೆ ನೀಡಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವಿಚಾರಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.

ಸಿಂಗಾಪುರ್ ನಲ್ಲಿ ಅತ್ಯಾಚಾರಿಗಳಿಗೆ 20 ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಕಬ್ಬಿನಿಂದ ಹೊಡೆಯುವ ಶಿಕ್ಷೆ ವಿಧಿಸಲಾಗುತ್ತದೆ. ಇದೇ ರೀತಿ ಶಿಕ್ಷೆಯನ್ನು ನೀಡಬೇಕು ಎಂದು ಪವನ್ ಕಲ್ಯಾಣ್ ಹೇಳಿದ್ದರು.

ಪವನ್ ಕಲ್ಯಾಣ್ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಈ ಬಗ್ಗೆ ವೈಎಸ್‍ಆರ್ ಕಾಂಗ್ರೆಸ್ ಸಂಸದ ವಿಜಯ್ ಸಾಯ್ ರೆಡ್ಡಿ ಪ್ರತಿಕ್ರಿಯಿಸಿ, ಪವನ್ ಕಲ್ಯಾಣ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇಡೀ ದೇಶವೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸುತ್ತಿದೆ ಎಂದು ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *